iruvudellava biTTu iradudaredege tuDivude jeevana... to leave behind what we have and long for things that are not there is life...is the rough translation of these beautiful lines of Kannada poetry by Gopalakrishna Adiga, from the popular song - 'yaava mOhana muraLi kareyito'...they sum up our lives in a way nothing else can... this constant look out called life...
Friday, February 05, 2010
ಕನ್ನಡ ಫಾಂಟ್ ಹೆಲ್ಪೂ...
ಹೊಸ ಲ್ಯಾಪ್ಟಾಪ್ ಬಂತು ಅಂತ ನಾಕು ದಿನ ಖುಷಿನಲ್ಲಿ ಕನ್ನಡದಲ್ಲಿ ಕುಟ್ಟಿದ್ದಷ್ಟೇ, ಅದ್ಯಾವ ಸುಡುಗಾಡು ಅಪ್ಡೇಟ್ ಹಾಕಿಕೊಂದ್ನೋ ಗೊತ್ತಿಲ್ಲ, ಈಗ ಬರಹ ಭೂತ ಆಗಿದೆ!! ಅಂದ್ರೆ ಟೈಪ್ ಮಾಡಿದ್ರೆ ಏನೂ ಅಕ್ಷರಾನೆ ಬರಲ್ಲ, ಅಥ್ವಾ ಬಂದರೆ ವಿಚಿತ್ರವಾಗಿ, ಕ ಅಂದ್ರೆ ಕೋ ಅಂತ - ಏನೇನೋ ಬರ್ತಿದೆ. ತಲೆ ಮೇಲೆ ಲ್ಯಾಂಗ್ವೇಜ್ ಬಾರ್ ಅಂತ ಬೇರೆ ಬಂದು ಕೂತ್ಕೊಲ್ಲತ್ತೆ! ಈ ಬ್ಲಾಗರ್ transliterationನಲ್ಲಿ ಒಂದ್ ಪದ ಸರ್ಯಾಗ್ ಬರದ್ರೆ ಇನ್ನೊಂದ್ ಬರ್ಯಲ್ಲ! ನೆನ್ನೆ ವಿಂಡೋಸ್ ೭ ಹಾಕಿದೀನಿ, ಅದಕ್ಕ್ ಮುಂಚೆ ವಿಸ್ತಾ ಇತ್ತು - ಆಗಲು same ಪ್ರಾಬ್ಲಮ್! ದಾರಿ ತೋರಿಸಿ ಪುಣ್ಯ ಕತ್ತ್ಕೊಲಿ, ಬ್ಲಾಗ್ ಬರ್ದಿಲ್ಲ ಅಂತ ಬಯ್ಯೋಕೆ ಮಾರಲ್ rights ಪಡ್ಕೊಲಿ;)
(ಇಷ್ಟು ಟೈಪ್ ಮಾಡೋಹೊತ್ತಿಗೆ ಸಾಕಾಯ್ತು! 'ಕೊಲಿ'ಗಲಿಗೆಲ್ಲಾ ಸಾರಿಗಳು!)
Sunday, May 04, 2008
ನಮ್ಮ ಮೆಚ್ಚಿನ ಬ್ಲಾಗುಗಳಲ್ಲಿ ಹೊಸ ಪೋಸ್ಟುಗಳಿವೆಯಾ? : ಗೂಗಲ್ ರೀಡರ್ ಬಗ್ಗೆ ಪುಟ್ಟ ಪರಿಚಯ
ಜಿಮೈಲ್ ಅಕೌಂಟ್ ಇದ್ದವರೆಲ್ಲಾ ಲಾಗ್ ಇನ್ ಆದಾಗ ಕಂಪ್ಯೂಟರ್ ಪರದೆಯಲ್ಲಿ ನಿಮ್ಮ ಎಡ ಮೇಲ್ತುದಿಯಲ್ಲಿ ಆರ್ಕುಟ್ ಇತ್ಯಾದಿ ಗೂಗಲ್‌ನ ಇತರ ಸೌಲಭ್ಯಗಳಿಗೆ ಜಿಮೈಲ್ ಅಕೌಂಟಿನಿಂದಲೇ ನೇರವಾಗಿ ಹೋಗುವ ಬಗ್ಗೆ ನೋಡಿರಬಹುದು. ಈ ಸಾಲಿನಲ್ಲೇ ರೀಡರ್ ಅಂತಲೂ ಒಂದು ಟ್ಯಾಬ್ ಇರುತ್ತೆ. ಅಲ್ಲಿ ಹೋಗಿ ನಿಮ್ಮ ರೀಡರ್ ಅಕೌಂಟ್ ಪ್ರಾರಂಭಿಸಬಹುದು. ರೀಡರ್ ಒಳಹೊಕ್ಕಮೇಳೆ ’ಆಯ್‌ಡ್ ಸಬ್ಸ್ಕ್ರಿಪ್ಶನ್’ ಅನ್ನುವ ಕಡೆ ನಿಮ್ಮ ನೆಚ್ಚಿನ ಬ್ಲಾಗ್/ ವೆಬ್ಸೈಟುಗಳ ಯು ಆರ್ ಎಲ್ ಒಂದೊಂದಾಗಿ ಸೇರಿಸುತ್ತಾ ಹೋಗಬಹುದು. ಹೀಗೆ ಸೇರಿಸಿದಮೇಲೆ ಆ ಸೈಟ್ ಅಥವಾ ಬ್ಲಾಗಿನಲ್ಲಿ ಹೊಸತೇನಾದರೂ ಪ್ರಕಟವಾದಾಗ ನಿಮ್ಮ ರೀಡರ್ ಅಕೌಂಟಿನ ಇನ್‌ಬಾಕ್ಸಿಗೆ ಆ ಬಗ್ಗೆ ಸೂಚನೆ ಬರುತ್ತೆ. ಹೊಸ ಪೋಸ್ಟುಗಳನ್ನ ಹುಡುಕಿ ಅಲೆಯೋದು, ಅಥ್ವಾ ನೋಡದೇ ಮಿಸ್ ಮಾಡೋದು ಇದ್ರಿಂದ ತಪ್ಪುತ್ತೆ. (ನನ್ನಂಥಾ ಸೋಂಬೇರಿ ಬ್ಲಾಗಿಗರ ತಿಂಗಳೆರಡು ತಿಂಗಳಿಗೆ ಬರೋ ಪೋಸ್ಟ್‌ಗಳ ನಿರೀಕ್ಷೆಯಲ್ಲಿ ನಮ್ಮ ಬ್ಲಾಗುಗಳಿಗೆ ವ್ಯರ್ಥ ತೀರ್ಥಯಾತ್ರೆ ಮಾಡೀ ಮಾಡೀ ಸೋತುಹೋಗೋದು ತಪ್ಪುತ್ತೆ!:P)
ಇದಕ್ಕೆ ಬ್ಲಾಗ್ ಅಥವಾ ಸೈಟಿನ ಮಾಲೀಕರು feed enable ಮಾಡಿರುವುದು ಅಗತ್ಯ. (ಬ್ಲಾಗರ್‌ನಲ್ಲಾದರೆ ಸೆಟಿಂಗ್ಸ್‌ನಲ್ಲಿ ಸೈಟ್‌ಫೀಡ್ ಅಂತಿರೋಕಡೆ ಕ್ಲಿಕ್ಕಿಸಿ ಇದನ್ನು enable ಮಾಡಬಹುದು.) ಸಾಮಾನ್ಯವಾಗಿ ಬ್ಲಾಗರ್, ವರ್ಡ್‌ಪ್ರೆಸ್‌ಗಳಲ್ಲಿರೋ ಬ್ಲಾಗುಗಳಲ್ಲಿ ಮುಂಚೆಯಿಂದಲೇ feed enable ಆಗಿರುತ್ತೆ ಅನ್ಸುತ್ತೆ. (ವರ್ಡ್‌ಪ್ರೆಸ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, ಆದ್ರೆ ಇಲ್ಲಿಯವರೆಗೆ ಯಾವ ವರ್ಡ್‌ಪ್ರೆಸ್ ಬ್ಲಾಗಿಗೆ ಸಬ್ಸ್ಕೈಬಿಸುವಾಗಲೂ ತೊಂದರೆಯಾಗಿಲ್ಲವಾದ್ದರಿಂದ ಹೀಗಿರಬಹುದು ಅಂತ ಹೇಳ್ತಿದ್ದೀನಷ್ಟೆ.) ಮುಕ್ಕಾಲು ಪಾಲು ವಬ್‌ಸೈಟುಗಳೂ ತಮ್ಮ ಹೊಸ ಪೋಸ್ಟುಗಳಿಗೆ ಹೀಗೆ feed enable ಮಾಡಿರುತ್ವೆ. ನಮ್ಮ ಕನ್ನಡದ ದಟ್ಸ್‌ಕನ್ನಡ, ಸಂಪದ - ಇವೆಲ್ಲ ಆ ಸಾಲಿಗೆ ಸೇರುವಂತಹವು. ಕೆಂಡಸಂಪಿಗೆಗೆ ಹೊಸ ಅವತಾರದಲ್ಲಿ feed enable ಮಾಡಿಲ್ಲ. ಪ್ರತೀಸಲ ಅಪ್‍ಡೇಟ್ ಆಗಿದೆಯೋ ಇಲ್ವೋ ನಾವೇ ಆ ಸೈಟಿಗೆ ಹೋಗಿ ಹುಡುಕಿ ನೋಡಿಕೊಳ್ಳಬೇಕು.
ರೀಡರ್ ಉಪ್ಯೋಗಿಸೋಕೆ ಷುರು ಮಾಡಿದ ಮೇಲೆ ನಮಗಿಷ್ಟವಾದ ಪೋಸ್ಟುಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳೋದೂ ಸುಲಭ. ಇದಕ್ಕೆ ಮೂರು ದಾರಿಗಳಿವೆ- ಒಂದು, ಯಾವುದೇ ಪೋಸ್ಟ್ ಓದಿದ ಕೂಡ್ಲೆ ರೀಡರ್‌ನಿಂದಲೇ ನಿಮ್ಮ ಗೆಳೆಯರಿಗೆ ಅದನ್ನು ಮೈಲ್ ಮಾಡಬಹುದು. ಎರಡು - ರೀಡರ್‌ನಲ್ಲಿ ಬರೋ ಹೊಸ ಪೋಸ್ಟ್‍ಗಳಲ್ಲಿ ನಿಮ್ಮ ಮೆಚ್ಚಿನವುಗಳನ್ನ ’ಶೇರ್’ ಮಾಡುವ ಆಯ್ಕೆ ಕ್ಲಿಕ್ಕಿಸಿದ್ರೆ ರೀಡರ್ ಅಕೌಂಟಿನಿಂದ ನಿಮ್ಗೆ ಸಿಗೋ ಪಬ್ಲಿಕ್ ಪೇಜಿನಲ್ಲಿ ಈ ಪೋಸ್ಟುಗಳು ಕಾಣಿಸಿಕೊಳ್ಳುತ್ವೆ. ಇದೊಂಥರಾ public list of your favourite reads ಅನ್ನಬಹುದು. ಇದಕ್ಕೇ ಪ್ರತ್ಯೇಕವಾದ ಯೂಆರೆಲ್ ಇದ್ದು, ನಿಮ್ಮ ಸ್ನೇಹಿತರು ಇಲ್ಲಿ ಬಂದು ನಿಮ್ಮ ಇತ್ತೀಚಿನ ಮೆಚ್ಚಿನ ಬರಹಗಳನ್ನು ಓದಬಹುದು. ನನ್ನ ರೀಡರ್ ಪೇಜ್ ಇಲ್ಲಿದೆ: http://www.google.com/reader/shared/user/16208109501848855281/state/com.google/broadcast
ಹಾಂ ಈ ಪುಟದಲ್ಲೇ get started with google reader ಅನ್ನೋ ಲಿಂಕನ್ನು ಕ್ಲಿಕ್ಕಿಸಿ ನಿಮ್ಮ ರೀಡರ್ ಯಾತ್ರೆ ಪ್ರಾರಂಭಿಸಬಹುದು:)
ಮೂರನೇದಾಗಿ, ಈ ಪಟ್ಟಿಯನ್ನು ನಿಮ್ಮ ಬ್ಲಾಗಿನಲ್ಲೂ ಹಾಕಿಕೊಳ್ಳಬಹುದು. ಹಲವು ಬ್ಲಾಗಿಗರು ಈ ಥರದ ಪಟ್ಟಿಗಳನ್ನ ತಮ್ಮ ಬ್ಲಾಗ್‌ಗಳಲ್ಲಿ ಹಾಕಿಕೊಂಡಿದ್ದಾರೆ. ನನ್ನ ಈ ಬ್ಲಾಗಿನಲ್ಲಿ ’Sree's shared items' ಅನ್ನುವ ಹೆಸರಲ್ಲಿ ಈ ಪಟ್ಟಿ ಇದೆ.
ಸರಿ, ಜಾಸ್ತಿ ತಲೆತಿನ್ನೋಕೆ ಹೋಗಲ್ಲ, ಉಪಯೋಗಿಸ್ತಾ ಹೋದಹಾಗೆ ಅದರ ವ್ಯಾಪ್ತಿ ನಿಮ್ಗೇ ಗೊತ್ತಾಗುತ್ತೆ. happy reading!:)
Sunday, March 16, 2008
ಕನ್ನಡ ಜಾಲಿಗರ ಮೀಟ್ - ಒಂದಷ್ಟು ಮೆಲುಕು
ಬ್ಲಾಗರ್ಸ್ ಮೀಟ್ ಬಗ್ಗೆ ಇ-ಮೈಲ್ ಗಳು, ಪೋಸ್ಟ್‌ಗಳು ಹಾರಾಡಿ ಇಲ್ಲೀವರೆಗೆ ಯುಆರೆಲ್ ಅಷ್ಟೆ ಆಗಿದ್ದವ್ರೆಲ್ಲರನ್ನ ಒಂದುಕಡೆ ಭೇಟಿಯಾಗೋ ಸಂಭ್ರಮ, excitementಗಳು ತುಳುಕಾಡಿ ಅಂತೂ ಇವತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಎಲ್ಲ ಸೇರುವಂತಾಯ್ತು. ನಾಲ್ಕಕ್ಕೆ ಕಾರ್ಯಕ್ರಮ ಅಂತ ಕಾಲು ಘಂಟೆ ಮುಂಚೆನೇ ಹೋಗಿ ಸೇರಿದವಳಿಗೆ ಇವರ್ ಬಿಟ್ಟ್ ಅವರ್ ಬಿಟ್ಟ್ ಇವರ್ ಬಿಟ್ಟು ಅವರ್ ಬಿಟ್ಟ್ ಇವರ್ಯಾರು ಅಂತ ತೆರೆದ ಕಣ್ಣಲ್ಲೇ ಗೆಸ್ಸಿಂಗ್ ಗೇಮ್ ಷುರು ಆಗಿತ್ತು. ಕಡೇ ಪಕ್ಷ ಈ ಮೀಟಿಗೆ ಆಹ್ವಾನ ಕಳಿಸಿದ್ದವರನ್ನಾದ್ರೂ ಸರಿಯಾಗಿ ಗುರುತಿಸಬೇಕು ಅಂತ ಆರ್ಕುಟ್ ಆಲ್ಬಂಗಳಿಗೆ ಭೇಟಿ ಕೊಟ್ಟಿದ್ರೂ ಕೊನೆಗೆ ಸಹಾಯಕ್ಕೆ ಬಂದದ್ದು ಯುಆರ್‌ಎಲ್‌ಗಳೇ!:)) ಯಾರಿರಬಹುದು ಅಂತ ಗೆಸ್ ಮಾಡ್ತಾ, ಪರಿಚಯ ಮಾಡಿಕೊಳ್ತಾ, ಮಾಡಿಸ್ತಾ...ನಾಕೂವರೆ ಸುಮಾರಿಗೆ ಕಾರ್ಯಕ್ರಮ ಷುರುವಾಯ್ತು. ಕಾರ್ಯಕ್ರಮದ ವರದಿ ಇಲ್ಲಿ ಮಾಡೋ ಸಾಹಸಕ್ಕೆ ಹೋಗಲ್ಲ, ಅದು ನಿಮಗೆ ಬೇರೆ ಕಡೆಯೂ ಸಿಗುತ್ತೆ ಅನ್ನೋ ನಂಬಿಕೆಯೂ ಇರೋದ್ರಿಂದ!:) ಕಾರ್ಯಕ್ರಮಕ್ಕೆ ನನ್ನ ಪ್ರತಿಕ್ರಿಯೆಗಳು, ನನ್ನಲ್ಲಿ ಎದ್ದ ಕೆಲವು ಪ್ರಶ್ನೆಗಳು, ಒಂದಿಷ್ಟು ಖುಷಿ - ಇವುಗಳು ಈಗ ಇಲ್ಲಿ ನಿಮಗಾಗಿ.
ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್‌ಹೆಡ್ ಟ್ರಾನ್ಸ್‌ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್‌ಕನ್ನಡದ ಶ್ಯಾಮಸುಂದರ್‍ಅವರು ಹೇಳಿದ್ರು. ಈಚೆಗೆ ಹುಲುಸಾಗಿ ಬೆಳೀತಿರೋ ಬ್ಲಾಗ್‌ಗಳನ್ನ ಓದ್ತಾ ಈ ಮಾತು ನನ್ನ ಮನಸ್ಸಿಗೂ ಬಂದಿತ್ತು. ಅದಕ್ಕೇ ಹೀಗೇಸುಮ್ಮ್ನೆಇಲ್ಲಿ ಬರೆಯೋದರ ಜೊತೆಗೆ ಸಂಗೀತಕ್ಕಾಗಿ sree-raaga.blogspot.com ಷುರು ಮಾಡಿದ್ದೆ. ಆದ್ರೆ ಹಾಗಂತ ಭಾವಲಹರಿಗಳಿಗೆ ಬೆಲೆಯಿಲ್ಲ ಅಂತಲ್ಲ. ಕಂಪ್ಯೂಟರ್ ಜನಾಂಗಕ್ಕೆ ಕನ್ನಡ ಹತ್ತಿರವಾಗಿಸೋದ್ರಲ್ಲಿ, ನಾವೂ ಕನ್ನಡ ಓದ್ತೀವಿ-ಬರೀತೀವಿ ಅನ್ನೋ ಅಭಿಮಾನ ಹುಟ್ಟಿಸೋದ್ರಲ್ಲಿ ಭಾವಲಹರಿಗಳ ಪಾತ್ರ ಅದನ್ನ ದಾಟಬೇಕಾದ ಅವಶ್ಯಕತೆಯಷ್ಟೇ ದೊಡ್ದದು ಅನ್ನಿಸುತ್ತೆ.
ಇದೇ ವಿಷ್ಯಕ್ಕೆ ಸಂಬಂಧ ಪಟ್ಟಹಾಗೆ ಶ್ಯಾಮ್‌ಸುಂದರ್ ಅವ್ರು ಹೇಳಿದ್ದ್ ಇನ್ನೊಂದು ಮಾತು - ಬ್ಲಾಗರ್ಸ್ ಜವಾಬ್ದಾರಿಯ ಬಗ್ಗೆ. ನನಗೇನ್ ಬೇಕೋ ಬರೀತೀನಿ, ನಿಂಗೆ ಇಷ್ಟ ಇದ್ದ್ರೆ ಓದು, ಕಷ್ಟವಾದ್ರೆ ಬಿಡು ಅನ್ನೋ ಧೋರಣೆ ತಪ್ಪು ಅಂದ್ರು. ಅದು ಸರೀನೇ... ಆದ್ರೆ ಬ್ಲಾಗ್ ಷುರುಮಾಡಿದ್ ಹೊಸದ್ರಲ್ಲಿ ನನಗೂ ಆ ಧೋರಣೆ ಇದ್ದದ್ದು ಸುಳ್ಳಲ್ಲ. ಆ ಬಗ್ಗೆ ತಿಳಿಯದೇ ಕನ್ನಡಸಾಹಿತ್ಯ.ಕಾಂನ ಶೇಖರ್‌ಪೂರ್ಣಅವರ ಜೊತೆ ವಾದಕ್ಕೂ ಇಳಿದಿದ್ದೆ! ಈಗ ಭಾರೀ ಜವಾಬ್ದಾರಿಯುತವಾಗಿ ಬರೀತೀನಿ ಅಂತಲ್ಲ. ಆದ್ರೆ ಕಡೇಪಕ್ಷ ಹಾಗೆ ಬರೀತಿಲ್ಲ ಅನ್ನೋ ಅರಿವು, ಅದರ ಬಗ್ಗೆ ಸ್ವಲ್ಪ guilt, ಚೆನ್ನಾಗಿ, ಅರ್ಥಪೂರ್ಣವಾಗಿ ಏನಾದ್ರೂ ಬರೀಬೇಕನ್ನೋ ಹಂಬಲ ಇದೆ ಅನ್ನಬಹುದು. ಇಷ್ಟು ಅನ್ನಿಸೋಕೆ ತಲೆಯಮೇಲೆ ಯಾವ ಬೋಧಿವೃಕ್ಷವೂ ಬೆಳೀಲಿಲ್ಲ, ೨ ವರ್ಷ ಹೀಗೇಸುಮ್ಮ್ನೆ ಕುಟ್ಟಿ ಉಳಿದ ಬ್ಲಾಗಿಗರ ಜೊತೆ interact ಮಾಡ್ತಾ, ಅವರು ಬರೆದದ್ದು ಓದ್ತಾ ಬಂದ ಅನುಭವ ಸಾಕಾಯ್ತು. ಒಂದಷ್ಟು introspection ಮಾಡಿಕೊಂಡ ಎಲ್ಲ ಬ್ಲಾಗಿಗರೂ ಹೀಗೆ ಅನುಭವದ ಘಟ್ಟಗಳನ್ನ ಹಾದುಹೋಗ್ತಾರೆ, ಹೀಗೇ ಬರೀತಾ ಹೋದ ಹಾಗೆ introspection ನಮ್ಮೊಳಗಿಂದ್ಲೇ ಅವಶ್ಯಕತೆಯಾಗಿ ಬರುತ್ತೆ ಅನ್ನಿಸುತ್ತೆ. ಯಾರಾದ್ರೂ ಸ್ವಲ್ಪದೊಡ್ಡವರು-ಅನುಭವಿಗಳು ನಮ್ಮ ಬರಹಗಳನ್ನ ಓದಿ, ನಮ್ಮ ಭಂಡಧೈರ್ಯಗಳಿಗೆ ನಾಕು ಪ್ರಶ್ನೆಗಳನ್ನಿಟ್ಟರೆ ಈ introspection ಇನ್ನಷ್ಟು ಸುಲಭವಾಗುತ್ತೆ. ಜೊತೆಗೆ ಸ್ವಲ್ಪ guidence ಕೂಡ ಸಿಕ್ಕರೆ ಗಟ್ಟಿಯೂ ಆಗ್ತೀವೆನೋ, ಒಳ್ಳೇ ಬರಹಗಾರರಲ್ಲದಿದ್ರೂ ಒಳ್ಳೆಯ ಓದುಗರಾಗಿಯಾದ್ರೂ...
ಅದೇನೇ ಇದ್ದರೂ ಯಾವ ಪಬ್ಲಿಶರ್ ಹಂಗಿಲ್ಲದೇ ನಾಕುಜನ ಓದುಗರನ್ನ ಗಿಟ್ಟಿಸಿಕೊಳ್ಳೋದರಿಂದ ನಮ್ಮಲ್ಲಿ ಒಂದುರೀತಿಯಲ್ಲಿ natural bratತನ ಇದ್ದೇ ಇರುತ್ತೆ, ಅದರಿಂದ ಬ್ಲಾಗ್ ಬರಹಗಳಿಗೇ ಒಂದು ವಿಶಿಷ್ಟ ಫ್ಲೇವರ್ ಕೂಡ ಇರುತ್ತೆ. ಅದು ತೀರಾ ಬೇಜವಾಬ್ದಾರಿತನವಾಗದೇ ಹೋಗೋದಕ್ಕೆ ಸ್ವಲ್ಪ ಎಚ್ಚರವಹಿಸಬೇಕಷ್ಟೆ. ಸಂವಾದ, ಬೇರೆ ಬರಹಗಳ ಓದು ಇದಕ್ಕೆ ಸಹಾಯವಾಗುತ್ತೆ ಅಂತ ನನಗನ್ನಿಸೋದು... ನಮ್ಮ-ನಮ್ಮ ನಡುವಿನ ಮಾತುಗಳು ಬೆಳೀಬೇಕು ಅನ್ನೋದಕ್ಕೆ, ಇವತ್ತಿನ ಮೀಟ್‌ನಂಥದ್ದರ ಅವಶ್ಯಕತೆಗೆ ಇನ್ನೊಂದು ಕಾರಣ...
ಬ್ಲಾಗಿಂಗ್ ಅನುಭವದ ಬಗ್ಗೆ ಮಾತಾಡಿದವ್ರಿಗೆ ಇನ್ನೊಂದೆರಡು ನಿಮಿಷ ಪ್ರಿಪರೇಷನ್ ಸಮಯ ಸಿಕ್ಕಿದ್ರೆ ಸ್ವಲ್ಪ ಫೋಕಸ್ಡ್ ಆಗಿ ಮಾತಾಡೋಕೆ ಸಾಧ್ಯವಾಗ್ತಿತ್ತೇನೋ ಅನ್ನಿಸ್ತು. ’ಚೆನ್ನಾಗಿದೆ’ ಅನ್ನೋದರಿಂದ ಮುಂದೆ ಹೋಗಿ ವಿಮರ್ಶೆಯೂ ಬರಬೇಕು ಅನ್ನೋ ಸುಧನ್ವ ದೇರಾಜೆಯವರ ಮಾತು ನಮ್ಮ ನಮ್ಮಲ್ಲಿ ಇನ್ನಷ್ಟು ಮಾತು-ಕತೆಯ ಅವಶ್ಯಕತೆಯನ್ನ ತೋರಿಸ್ತು ಅನ್ನಿಸುತ್ತೆ. ಈ ರೀತಿಯ ಹೀಗೇ ಸುಮ್ಮನೆ ಚೆನ್ನಾಗಿದೆ ಅನ್ನೋ ಕಾಮೆಂಟುಗಳಿಗೂ ಅವುಗಳದ್ದೇ ಬೆಲೆ ಇದೆ, ಬರೆಯುವವರ ಹುಮ್ಮಸ್ಸಿಗೆ ನೀರೆರೆಯೋದರಲ್ಲಿ. ಆದರೆ ಪ್ರಕಟಿತ ಸಾಹಿತ್ಯಕ್ಕೆ ಸಿಗುವಷ್ಟು ವಿಮರ್ಶೆಯ ಮರ್ಯಾದೆ ಸಿಗದಿರೋದಕ್ಕೆ ಇದು ಬಹುಮಟ್ಟಿಗೆ ’ಹೀಗೆ ಸುಮ್ಮನೆ’ ಬರಿಯೋ-ಓದೋ ಮೀಡಿಯಮ್ ಆಗಿರೋದು ಕಾರಣವೇನೋ. ರೀಡಿಂಗ್ ಕ್ಲಬ್ ಆಗಿಯೋ ಮೈಲ್ ಗ್ರೂಪ್ ಆಗಿಯೋ ಬರೆದದ್ದನ್ನು ಚರ್ಚಿಸಲು ಒಂದು ಮಾಧ್ಯಮ ಹುಡುಕಿಕೊಳ್ಳಬೇಕಾದ ಅಗತ್ಯ ಇದೆ ಅನ್ನಿಸುತ್ತೆ, ಕಾಮೆಂಟ್‌ಗಳ ಮೂಲಕವೇ ಇದು ಸಾಧ್ಯವಾಗೋದು ಅಷ್ಟು ಸುಲಭವಲ್ಲವೇನೋ ಅನ್ನಿಸುತ್ತೆ. ಯಾಕಂದ್ರೆ ಬ್ಲಾಗ್ ಓದೋದು, ಕಾಮೆಂಟಿಸೋದು ಎಲ್ಲಾ ಕ್ಯಾಶುವಲ್ಲಾಗಿ, ಯಾವಾಗ್ಲೋ ಸಿಕ್ಕ ಎರಡು ನಿಮಿಷದ ಬ್ರೇಕ್‌ನಲ್ಲೂ ನಡೆದುಹೋಗ್ತಿರುತ್ತೆ. ಫೋಕಸ್ಡ್ ಪ್ರತಿಕ್ರಿಯೆ-ಚರ್ಚೆಗಳಿಗೆ ಅದಕ್ಕೇ ಆದ ಒಂದು ಸ್ಥಾನ ಕಲ್ಪಿಸದೇ ಇದು ಸಾಧ್ಯವಾಗಲ್ಲ. ಕನ್ನಡ ಬ್ಲಾಗ್‌ಗಳ ಸಂಖ್ಯೆಯ ಜೊತೆ ವ್ಯಾಪ್ತಿಯೂ ಬೆಳೀತಿರೋ ಕಾಲದಲ್ಲಿ ಅವುಗಳನ್ನ ಪೋಷಿಸೋದಕ್ಕೆ ಈ ರೀತಿಯ ಸಪೋರ್ಟ್ ಸಿಸ್ಟಂ ಹುಟ್ಟೋ ಅವಶ್ಯಕತೆ ಇದೆ ಅನ್ನಿಸುತ್ತೆ. ಇವತ್ತಿನ ಮೀಟ್ ಈ ಬಗೆಯ ಸಂವಾದಗಳಿಗೆ ಒಂದು ಒಳ್ಳೆಯ ಪ್ರಾರಂಭ ಅನ್ನಿಸುತ್ತೆ.
ಚಹಾ ವಿರಾಮದಲ್ಲಿ ಜಯಾ ಹೇಳಿದಂತೆ ಸ್ವಲ್ಪ preachy ಅನ್ನಿಸಿದ್ರೂ ಚಿಂತನೆಗೆ ಹಚ್ಚೋ ಹಲವು ವಿಷ್ಯಗಳು ಕಾರ್ಯಕ್ರಮದಲ್ಲಿದ್ದ್ವು ಅನ್ನೋದು ನಿಜ. ಮೊದಲ ಪ್ರಯತ್ನವಾಗಿ ಕಾರ್ಯಕ್ರಮ ತುಂಬಾ ಯಶಸ್ವಿ ಅನ್ನಿಸ್ತು. ನಮ್ಮ ನಡುವೆ ಇನ್ನೊಂದಿಷ್ಟು interactionಗೆ ಅವಕಾಶ, ಕಂಟೆಂಟ್ ಬಗ್ಗೆ ಇನ್ನೊಂದಿಷ್ಟು ಗಮನ ಇದ್ದಿದ್ದರೆ... ಇರುತ್ತೆ, ಮುಂದಿನ ಪ್ರಯತ್ನದಲ್ಲಿ, ಅನ್ನಿಸುತ್ತೆ.
ಒಟ್ಟ್ನಲ್ಲಿ ಹಲವು ದಿನಗಳಿಂದ ಒಬ್ಬರದೊಬ್ಬರು ಬ್ಲಾಗ್ ಓದ್ತಾ, ಕಮೆಂಟಿಸ್ತಾ ಇದ್ದ ಹಲವು ಗೆಳೆಯರನ್ನ ಮೊದಲಬಾರಿ ಮುಖತಃ ಭೇಟಿ ಮಾಡಿದ್ದು ತುಂಬಾ ಖುಷಿಯಾಯ್ತು! ಶ್ರೀ, ಸುರೇಖಾ(ಮನಸ್ವಿನಿ), ಸಿಂಧು, ಶ್ರೀನಿಧಿ, ಸುಶ್ರುತ, ರಾಧಾಕೃಷ್ಣ, ಅರವಿಂದ್ ನಾವಡ, ಶಿವಕುಮಾರ್, ಗುರುರಾಜ್... ಅಲ್ಲದೇ ಓದಿ ಚೆನ್ನಾಗಿ ಬರೀತಾರೆ ಅನ್ನಿಸಿದ್ದ ಹಲವು ಬ್ಲಾಗಿಗರನ್ನ ನೋಡಿದ್ದು, ಮಾತಾಡಿಸಿದ್ದು, ಹೊಸ ಪರಿಚಯಗಳಾಗಿದ್ದು... I guess everyone shares the feeling of wanting to take this forward. ಪ್ರಣತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು! ಮಾತಾಡೋಕೆ ಟೈಮ್ ಸಾಲಲಿಲ್ಲ, ಮುಂದಿನ ಭೇಟಿ ಬೇಗ ಆಗ್ಬೇಕು! ಈ ಸಲ ಬರದೇ ಮಿಸ್ಆದ್ ಬ್ಲಾಗಿಗರನ್ನೂ ಮುಂದಿನಸಲ ಮೀಟ್ ಮಾಡೋ ಹಾಗಾಗಬೇಕು!
ಅಂದಹಾಗೆ ಯಾವ ಮದುವೆಮನೆ ಹುಡುಗೀರ್‍ಗೂ ಹೆಚ್ಚಾಗಿ ಸಂಭ್ರಮ-ಸಡಗರಗಳಿಂದ ಓಡಾಡ್ತಿದ್ದ ನಮ್ಮ ಶ್ರೀನಿಧಿ-ಸುಶ್ರುತ ಹುಡುಗರ್ ಗುಂಪನ್ನ ನೋಡಿ ಭಾಳಾ ಖುಷಿಯಾಯ್ತು!
ತುಂಬಾ ಕೊರೆದುಬಿಟ್ಟೆ! ಏನ್ ಮಾಡೋದು, ಅಷ್ಟು ಜನ ಕುಟ್ಟಿಗರನ್ನ ಒಟ್ಟಿಗೇ ನೋಡಿದ್ದ್ ಎಫೆಕ್ಟು!:P ಸರಿ ಇನ್ನು ಮಿಕ್ಕ ವಿವರಗಳಿಗೆ ಬೇರೆ ಬ್ಲಾಗ್‌ಗಳನ್ನ ನೋಡಿ:) ಮತ್ತೆ ನನ್ನ ಕ್ಯಾಮರಾ ಚಾರ್ಜ್ ಮಾಡೊದ್ ಮರೆತಿದ್ರಿಂದ ಫೋಟೋಗಳಿಗೆ ಕಾಯಬೇಕು...ನೀವ್ ಯಾರಾದ್ರೂ ಕ್ಲಿಕ್ಕಿಸಿದ್ರೆ ಪ್ಲೀಸ್ ಕಳ್ಸಿ!:)
Thursday, March 08, 2007
ಹೀಗೇಸುಮ್ಮನೆ ಎದ್ದಿದ್ದಲ್ಲ! :)
ಓಹ್ ಹನ್ನೆರಡು ಹೊಡೆಯೋದಕ್ಕೆ ಮೊದಲು, ಮಹಿಳಾ ದಿನದ ಶುಭಾಶಯಗಳು!
ಏನು ಇದ್ದಕ್ಕಿದ್ದಂತೆ ಗೋಕುಲಾಷ್ಟಮಿಗೂ ಇಮಾಮ್ ಸಾಬರಿಗೂ ಸಂಬಂಧ ಕಲ್ಪಿಸ ಹೊರಟಿದಾಳಲ್ಲಾ, ಬರೀದೇ ಬರೀದೇ ಇವಳ ಕುಟ್ಟುಮಣೆ ದಿಕ್ಕುಗೆಟ್ಟಿರಬೇಕು ಅಂದುಕೊಂಡ್ರಾ? ಏನಪ್ಪಾ ಸ್ವಲ್ಪನೂ ತಾಳ್ಮೆ ಇಲ್ಲ ನಿಮ್ಗೆ!:p
ಕುಟ್ಟೋದಕ್ಕೆ ರೆಸ್ಟ್ ಕೊಟ್ಟಿದ್ರೂ ನಿಮ್ಮಗಳ ಕುಟ್ಟಂಬಲಗಳಿಗೆ ವಿಜಿಟ್ ಕೊಟ್ಟು ತಮ್ಮ ಪ್ರತಾಪಗಳನ್ನ ಕಂಡು ಧನ್ಯಳಾಗೋ ಪುಣ್ಯಕಾರ್ಯವನ್ನೇನೂ ನಾನು ನಿಲ್ಲಿಸಿರ್ಲಿಲ್ಲವಷ್ಟೆ, ಹೀಗಿರಲಾಗಿ ,ಇತ್ತೀಚೆಗೆ ಇಂತು ಕನ್ನಡ ಬ್ಲಾಗ್ ಭೂಮಿಯಲ್ಲಿ ಅಲೆದಾಡುತ್ತಿದ್ದ ನನ್ನ ಅಂತರಾತ್ಮಕ್ಕೆ ಹಿಂದೆಂದೂ ಕಂಡಿರದ ಅಪೂರ್ವವೊಂದು ಕಂಡು ಮನಸ್ಸು ಹಿಗ್ಗಿ ಹೀರೇಕಾಯಿಯಾಯಿತು! ಆ ಹೀರೇಕಾಯಿಯನ್ನ ಹೀಗೇ ಸುಮ್ಮನೆ ಬಿಟ್ಟುಬಿಡದೆ ಹಾಕಿ ಈಗ ಕೂಟು, ಹುಳಿತೊವ್ವೆಗಳನ್ನು ಮಾಡಬೇಕನ್ನೋ ಮಹದಾಕಾಂಕ್ಷೆ ಇರುವುದೆಲ್ಲ ಘನಕಾರ್ಯಗಳನ್ನು(?) ಬಿಟ್ಟು ಇಲ್ಲಿ ಬಂದು ಕುಟ್ಟೋದಕ್ಕೆ ಪ್ರೇರೇಪಿಸಿತು!
ಸಾಕಮ್ಮಾ ಪೀಠಿಕಾ ಪ್ರಕರಣ, ಚುಕ್ಕೆಗೆ ಬಾ* ಅನ್ನುತಿದೀರಾ? ಬಂದೆ ಬಂದೆ, ಬಂದೇಬಿಟ್ಟೆ:))
ಅಲ್ಲ, ಇಷ್ಟು ದಿನ ಕನ್ನಡದಲ್ಲಿ ಬ್ಲಾಗ್ ಗಳೆನೋ ಚೆನ್ನಾಗಿಯೇ ಬರುತ್ತಿತ್ತು...ಓದೋಕೂ ಖುಷಿಯಾಗ್ತಿತ್ತು, ಆದ್ರೆ ಎಲ್ಲೋ ಒಂದು ಕಡೆ ಏನಪ್ಪಾ ಒಬ್ಬಳೇ ಅಲೀತಿದೀನಿ ಈ ಗಂಡುಭೂಮಿನಲ್ಲಿ ಅಂತ ನನ್ನಂಥಾ 'ಗಂಡುಬೀರಿ'ಗೂ ಅನ್ನಿಸಿಬಿಡ್ತಿತ್ತು! ಮನಸ್ವಿನಿ ಬಿಟ್ಟರೆ ನನ್ನ ಕಣ್ಣಿಗೆ ಯಾವ ಕನ್ನಡತಿಯೂ ಕಂಡಿರಲಿಲ್ಲ ಅನ್ನಿಸುತ್ತೆ ಇಲ್ಲಿ... ಮೊನ್ನೆ ಸುಶ್ರುತರ ಮೌನಗಾಳದಿಂದ ಸಿಂಧು ಅವರ ಎಲ್ಲ ನೋಟಗಳಾಚೆಗೆ ಕಣ್ಣು ಹಾಯಿಸಿದೆ...ಕವನಗಳು ಓದಿಸಿಕೊಳ್ಳುತ್ತಾನೇ ಹೋದ್ವು! ನೊಂದ ಹೃದಯವೇ... , ಕೇಳಬಾರದಿತ್ತು...ಆದ್ರೂ,
ತಂಪಾಗಿ ಷುರುವಾಗಿ ಕೊನೆಯಲ್ಲೆಲ್ಲೋ ಮೆಲ್ಲಗೊಂದು ಪ್ರಶ್ನೆ ಇಡುವ ಸುಪರ್ಣಾ ನದಿಯ ತೀರದಲ್ಲೊಂದು ಸಂಜೆ...
ಅಲ್ಲಿಂದ ಮನಸ್ಸನ್ನ ಮಾತಾಡಿಸುತ್ತಿರೋ ಶ್ರೀ (ಹೀಗೇ ಸುಮ್ಮನೆ ಇಲ್ಲಿ ಬಂದು ಕೂತಿರೋ ನಾನಲ್ಲಪಾ!:)) ) ಮನೆಗೊಂದು ಭೇಟಿ...ಕನಸು -ನನಸುಗಳ ಕನವರಿಕೆಗಳು, ಪುಟ್ಟ ಪುಟ್ಟ ಹರಟೆಗಳು, ಎಲ್ಲಕ್ಕಿಂತ ಹಿಡಿಸಿದ್ದು ಪುಟ್ಟ ಕವನ - ಮನಸು ಏಕಾಂಗಿಯಾದಾಗ...
ಯಾವುದೇ ದಿನಾಚರಣೆಗಳಿಗೆ ಅಂಥದ್ದೇನೂ ಮಹತ್ವ ಕೊಡೋದಿಲ್ಲ ನಾನು. ಹಾಗೆ ಮಹಿಳಾ ದಿನಕ್ಕೆ ಸರಿಯಾಗೆ ನನ್ನ ಕಣ್ಣಿಗೆ ಎರಡು ಕನ್ನಡತಿ ಬ್ಲಾಗ್ ಗಳು ಬಿದ್ದಿದ್ದು, ಅವು ಕಣ್ಣಿಗೇ ನಿಲ್ಲದೆ ಇದೇ ಸಮಯಕ್ಕೆ ಸರಿಯಾಗಿ ಹೃದಯಕ್ಕೂ ಧಾಳಿಯಿಟ್ಟಿದ್ದು ಕಾಕತಾಳೀಯ. ಆದ್ರೆ ಆ ಖುಷಿಯಲ್ಲಿ ನಾನು ನನ್ನ ಇಷ್ಟು ದಿನದ ನಿದ್ದೆ ಸ್ವಪ್ರೇರಣೆಯಿಂದ ಬಿಟ್ಟಿದ್ದು, ಈ ಅಪರಾತ್ರಿಯಲ್ಲಿ ಇಷ್ಟುದ್ದ ಕೊರೀತಾ ಕೂತಿರೋದು ಜಗತ್ತಿನ ವಿಸ್ಮಯಗಳ ಪಟ್ಟಿಗೆ ಸೇರಬೇಕಂತ ನನ್ನ ನಿದ್ರಾಮಹಾತ್ಮೆಯನ್ನ ಬಲ್ಲವರೆಲ್ಲ ಕ್ಯಾಂಪೇನ್ ಮಾಡೋದಂತೂ ಖಂಡಿತ! ;D
P.S,: ಈಗಷ್ಟೇ ಈ ಮಂಕುತಲೆಗೆ ಫ್ಲ್ಯಾಷ್ ಆದ ಇನ್ನೊಂದು ಕಾಕತಾಳೀಯ ವಿಷ್ಯ - ಸಿಂಧು, ಶ್ರೀ ಎರಡೂ ನನ್ನವೇ ಹೆಸರುಗಳಾಗಿರೋದು!! (ಸಿಂಧು ನನ್ನ 'ಪೆಟ್ ನೇಮ್'!)
(ಸಿಂಧು ಹಾಗೂ ಶ್ರೀ ಇಬ್ಬರೂ ನನ್ನ ಕಣ್ಣಿಗೆ ಬಿದ್ದಿದ್ದು ಈಗ ಅಷ್ಟೆ. ಶ್ರೀ ಮೇ ೨೦೦೬ರಿಂದ, ಸಿಂಧು ಡಿಸೆಂಬರ್ ೨೦೦೬ರಿಂದ ಕುಟ್ಟುತ್ತಿದಾರೆ ಅನ್ನುತ್ತೆ ಬ್ಲಾಗರ್)
*ಚುಕ್ಕೆಗೆ ಬಾ = come to the point! translation courtesy a friend of mine who thinks he cracks a joke everytime he opens his mouth!:))
Sunday, June 18, 2006
ಒಂದು retrospection?
ಕನ್ನಡಸಾಹಿತ್ಯ.ಕಾಂನಲ್ಲಿ ಶೇಖರ್ ಪೂರ್ಣ ಅವರ ಸಂಪಾದಕೀಯದ ಲಿಂಕ್ ಗೆಳೆಯರೊಬ್ಬ್ರು ಕಳಿಸಿದಾಗ ಓದಿ ಮೊದ್ಲಿಗೇನೋ ಸ್ವಲ್ಪ ಖುಷಿನೇ ಆಯ್ತು. ಅದೇ ಖುಷಿಯಲ್ಲಿ ನಾಕಾರು ಗೆಳೆಯರಿಗೆ ಮೈಲ್ ಮಾಡಿ ಲಿಂಕ್ ಕೊಟ್ಟಿದ್ದೂ ಆಯ್ತು. ಆದ್ರೆ ಆಮೆಲೆ ಹಾಗೇ ಕೂತಾಗ ಕೆಲವು ಪ್ರಶ್ನೆಗಳು ಬಂದ್ವು. ಇವತ್ತು ಅವುಗಳ್ ಬಗ್ಗೆನೇ ಮೊದ್ಲು ಬರೆದುಬಿಡ್ತೀನಿ.
ಬ್ಲಾಗ್ ಅನ್ನೋದು ಒಂದು ಮಾಧ್ಯಮ - ಅದನ್ನ್ ಯಾರ್ ಯಾರು ಹೇಗ್ ಬಳಸ್ಕೋತಾರೆ ಅವರವ್ರಿಗೆ ಬಿಟ್ಟಿದ್ದು... canonical ಸಾಹಿತ್ಯದ parameters ಅದಕ್ಕೆ apply ಮಾಡಬೇಕಾ? ಬೇರೆ ಭಾಷೆಗಳಲ್ಲಿ ಬ್ಲಾಗ್ ಗಳಿಗೆ ಇಷ್ಟು ಗಮನ ಕೊಡ್ತಿದಾರಾ? ಬ್ಲಾಗ್ ಅನ್ನೋದು ಮಲ್ಟಿನ್ಯಾಷನಲ್ ಗ್ಲೋಬಲಿಸ್ಮ್ ನ ಐಡಿಯಾಲಜಿಯನ್ನೂ ತನ್ನ ಜೊತೆಗೆ ತರುತ್ತೆ. ಕಂಪ್ಯೂಟರ್ ಇದ್ದವ್ರಿಗೆಲ್ಲ ಖಾಲಿ ಸ್ಲೇಟ್ ಒದಗಿಸುತ್ತೆ. ಅದರಲ್ಲಿ ಸಾಹಿತ್ಯವೇ ಗೀಚ್ಬಹುದು, ಕಾಡು ಹರಟೆಯನ್ನೇ ಕುಟ್ಟ್ಬಹುದು, ಡೈರಿನೇ ಬರೆದಿಡ್ಬಹುದು. ಬರೆದದ್ದೆಲ್ಲ ಸಾಹಿತ್ಯ ಆಗೊಲ್ಲ ಅಲ್ಲ್ವ?
ಹೀಗೇ ಯೋಚಿಸ್ತಾ ನಾನ್ ಯಾಕೆ ಬ್ಲಾಗ್ ಬರೀತೀನಿ ಅಂತ ಪ್ರಶ್ನೆನೂ ಬಂತು. ಸುಮ್ಮ್ನೆ ಒಂದ್ಸಲ ಇಲ್ಲಿಯವರ್ಗೆ ಬರೆದಿದ್ದನ್ನ ನೋಡ್ದೆ...ಶೇಖರ್ ಸರ್ ಹೇಳಿರೋಹಾಗೆ ಯಾವ್ದೋ ಭಾವಜೀವನದ ತುಣುಕುಗಳೆ ಹೆಚ್ಚು ಕಂಡ್ವು. ಆದ್ರೆ ಅದನ್ನ್ ಬಿಟ್ಟು ಬೇರೆ ಥರದವೂ ಇವೆ. ಆದ್ರೆ ನೋಡ್ತಾ ನೋಡ್ತಾ ಭಾವಗಳ ಭರಪೂರಕ್ಕಿರೋ ಶಕ್ತಿ ಇಲ್ಲದೇ ಸುಮ್ಮ್ನೆ ತೋಚಿದ್ದು ಗೀಚಿದ್ದು, ಕೆಲವು ಬರೀಬೇಕನ್ನೋ ಬಲವಂತಕ್ಕೆ ಬರೆದಿದ್ದೇನೋ ಅಂತಲೂ ಅನ್ನಿಸ್ತು. ಹಾಗೇ ನಾನ್ಯಾವ ಘನವಾದ ಸಾಹಿತ್ಯ ರಚನೆಯಲ್ಲಿ ತೊಡಗಿದೀನಿ ಅನ್ನೋ ಭ್ರಮೆ ನನ್ನನೇನ್ ಕಾಡಿಲ್ಲ ಅನ್ನಿಸ್ತು...
'ವನಸುಮದೊಲೆನ್ನ...'ಬ್ಲಾಗ್ ನನ್ನಷ್ಟಕ್ಕೆ ನಾನು ನನ್ನಿಷ್ಟಕ್ಕೆ ಬೇಕಾದ್ದು ಗೀಚಿ ಹಾಕುವ ಗ್ರಾಫಿಟಿ ಗೋಡೆ ಆಗಿದೆ ಅನ್ನಿಸ್ತು...ಅದರ ಜೊತೆಗೇ ಸ್ನೇಹಿತರೊಬ್ಬರು ಇದು loss of relative privacy ಅಂತ ಹೇಳಿದ್ದ್ ಮಾತೂ ನೆನಪಾಯ್ತು...ತೀರ ನನ್ನಷ್ಟಕ್ಕೆ ಬರಿಯೋಕೆ ಡೈರಿ ಇದೆಯಲ್ಲ ಅನ್ನೋ ಮಾತೂ ಮನಸ್ಸಲ್ಲಿ ಹಾದು ಹೋಯ್ತು. ನಾಕು ಜನ ಓದ್ಲಿ ಅನ್ನೋ ಆಸೆ ಎಲ್ಲೋ ಒಂದುಕಡೆ ಇದ್ದೇ ಇದೆ, ನಿಜ, ಅದರ್ ಬಗ್ಗೆ apologetic ಆಗಬೇಕಿಲ್ಲ, ಹಾಗಂತ ನಾಕ್ ಜನ ಓದ್ತಾಅರೆ ಅನ್ನೋ ಮಾತ್ರಕ್ಕೆ ಇದು ಯಾವ್ದೇ ಸೀರಿಯಸ್ ಸಾಹಿತ್ಯಿಕ ಆಸಕ್ತಿಗಳಿಗೆ alternative ಆಗೋದಿಲ್ಲ ಅನ್ನೋ ನಂಬಿಕೆ...
ಬರಿಯೋದು ಖುಷಿಯ ಕೆಲ್ಸ ಅಂತ ಬ್ಲಾಗಿಗೆ ತಗುಲಿಕೊಂಡಿದ್ದೀನಿ...ಆದ್ರೆ ಬದುಕು attention ಕೇಳ್ದಾಗ ಬ್ಲಾಗ್ ಮೌನ ತಾಳುತ್ತೆ... ಸಹನೀಯವೋ ಅಸಹನೀಯವೋ, ನನ್ನ್ choice ಅದೇ... ನನ್ನನ್ನ ಹೊಗಳಿ, ತಿವಿದು, ಓಲೈಸಿ ಬರೀ ಅಂದ ಎಲ್ಲ ಗೆಳೆಯರಿಗೂ thanks:) ಜೀವನ extremes ಕಡೆ ಹೋಗದಿದ್ದಾಗಲೆಲ್ಲ ಇಲ್ಲಿ ಹರಟುತ್ತಾನೇ ಇರ್ತೀನಿ ಅಂತ promise ಮಾಡ್ತಾ...
ಶ್ರೀ
Monday, March 13, 2006
ನಾನೂ ನನ್ನ ಬರಹ!
ಮುಂಚಿನಿಂದ ಓದುವ ಬರೆಯುವ ಗೀಳೇನೋ ಇತ್ತು - ಆದ್ರೆ ಈಚೆಗೆ ಬರೆದದ್ದು ಕಡಿಮೆ. ಕಾಲೇಜಿನಲ್ಲಿದಾಗ ಜಾಸ್ತಿ ಸಮಯ ಇರ್ತಿತ್ತೋ ಅಥವಾ distractions ಕಡಿಮೆ ಇದ್ದ್ವೋ...ಒಟ್ಟಿನಲ್ಲಿ ಆಗ ಎನಾದ್ರೂ ಬರೀತಿದ್ದೆ...ಯಾವ್ದೋ essay competitionನೋ ಅಥ್ವಾ ಇನ್ನ್ಯಾವ್ದೋ ಮನಸ್ಸಿಗೆ ನಾಟಿದ/ ಸ್ವಲ್ಪ ಅಲ್ಲಾಡಿಸಿದ ವಿಷಯನೋ ತಲೆಗೆ ಹೊಕ್ಕಾಗಲೆಲ್ಲ ನೋಟ್ ಬುಕ್ ನಲ್ಲಿ ನಾಕು ಸಾಲು ಗೀಚೋದು ಅಭ್ಯಾಸ. ಪುಟ್ಟ ಹುಡುಗಿ ಅಮ್ಮನ ಕಾಲೇಜು ಪುಸ್ತಕಗಳಲ್ಲಿ ನೋಡಿದ್ದ ಅಮ್ಮನ ಭಾವಜೀವನದ, ಮುಗ್ಧತೆಯ, ಯೋಚನಾಶೀಲತೆಯ, ಕಲ್ಪನೆಯ ತುಣುಕುಗಳು ಈ ಗೀಚುವಿಕೆಗೆ inspiration ಆಗಿತ್ತೇನೋ. ಒಟ್ಟಿನಲ್ಲಿ ನನ್ನ ನೋಟ್ ಬುಕ್ ಗಳ ಹಿಂದಿನ ಪುಟಗಳು ನನ್ನ ಪ್ರಪಂಚದ ಆತ್ಮೀಯ ಭಾಗವಾಗಿದ್ದವು. note bookನ ಜೊತೆಯ ನಂಟು ಕಳೆದದ್ದರಿಂದಲೋ ಏನೋ ಈ ನನ್ನ ಪ್ರಪಂಚದಿಂದ ಕೆಲವು ದಿನ ದೂರವಾಗಿದ್ದೆ. note bookನ ಜಾಗಕ್ಕೆ ಕಂಪ್ಯೂಟರ್ ಬಂದು, ತನ್ನ ಜೊತೆ ಇಂಟರ್ನೆಟ್ಟನ್ನೂ ತಂದಾಗ ಬ್ಲಾಗ್ ಅನ್ನೋ ಹೊಸ ಖಾಲಿ ಸ್ಲೇಟು ನನ್ನ ಬತ್ತಳಿಕೆಗೆ ಒಡ್ಡಿಕೊಂಡು, ನಾನು ಅದಕ್ಕೆ ಒಗ್ಗಿಕೊಂಡು ನನ್ನ ಈ ಒದ್ದಾಟಗಳಿಗೆ ಸಹೃದಯಿ ಸ್ನೇಹಿತರ ಒತ್ತಾಸೆಯೂ ಸೇರಿಕೊಂಡು ಕಳೆದು ಹೋದ ಗೊಂಬೆಯೊಂದು ಹೊಸ ಅಲಂಕಾರದಲ್ಲಿ ಕೈಗೆ ಸಿಕ್ಕ ಮಗುವಿನಂತೆ ನನ್ನದೇ ಖುಷಿಯಲ್ಲಿ ಮತ್ತೆ ಬರೆಯೋದಕ್ಕೆ ಪ್ರಾರಂಭಿಸಿದೆ.
ಆಫೀಸ್ನಲ್ಲಿ ಕನ್ನಡ ಬಳಕೇನ ಬರಹದ ಮೂಲಕ ಷುರು ಮಾಡಿದ್ದೆ. ಈ ಬ್ಲಾಗ್ ಹುಚ್ಚು ಹಿಡಿದ್ಮೇಲೆ ಅದನ್ನೇ ಇಲ್ಲೂ ಉಪಯೋಗಿಸೋಕೆ ಷುರು ಹಚ್ಚ್ಕೊಂಡೆ. ಆದ್ರೆ ಇದ್ದದ್ದು ಒಂದೇ ಸಮಸ್ಯೆ. ಇಂಗ್ಲೀಷ್ ನಲ್ಲಿ ಬರೆದ ಪೋಸ್ಟ್ ಗಳನ್ನ ಮನೆಯಲ್ಲಿ ಬರೆದು ತಂದು ಇಲ್ಲಿ ಪೋಸ್ಟ್ ಮಾಡ್ಬಹುದಿತ್ತು. ಆದ್ರೆ ಮನೆಯಲ್ಲಿ ಬರಹದ ಹಳೆಯ ವರ್ಶನ್ ಇದ್ದಿದ್ರಿಂದ ಕನ್ನಡದಲ್ಲಿ ಅಲ್ಲಿ ಬರೆದು ಇಲ್ಲಿ ಪೋಸ್ಟ್ ಮಾಡೋಕಾಗ್ತಿರ್ಲಿಲ್ಲ. ಹಾಗೇ ಆಫೀಸ್ನಲ್ಲೇ ಅಲ್ಲೊಂದು ಇಲ್ಲೊಂದು ಖಾಲಿ ನಿಮಿಷಗಳನ್ನ ಕದ್ದು ಏನೋ ನಾಕು ಸಾಲು ಗೀಚ್ತಿದ್ದೆನಾದ್ರೂ ಮನಸ್ಸು ಬಂದಾಗ(ನನ್ನ್ ಕೇಸ್ನಲ್ಲಿ ಇದು usually ಆಗೋದು ರಾತ್ರಿ ೧೧ ಘಂಟೆ ಮೇಲೇನೇ!), ಮನಸ್ಸು ಬಂದಷ್ಟು ಹೊತ್ತು ಬರ್ಯೋದಕ್ಕಾಗ್ತಿರ್ಲಿಲ್ಲ ಅನ್ನೋ ಬೇಜಾರು ಆಗಾಗ ಕಾಡ್ತಾನೇ ಇತ್ತು.
ಅಷ್ಟರಲ್ಲಿ bsnl ದಯೆಯಿಂದ ಮನೆಯಲ್ಲಿ ನೆಟ್ ಬಂತು. ಸರಿ ಇನ್ನು ಪೋಸ್ಟ್ ಮೇಲೆ ಪೋಸ್ಟ್ ಕುಟ್ಟಿ ಬಿಸಾಕೋದು ಅಂತ ಹಕ್ಕಿಯಂತೆ light ಆಗಿ ಹಾರೋದ್ರಲ್ಲಿದ್ದೆ! ಮೊದಲ ಹೆಜ್ಜೆ ಅಂತ ಬರಹದ ಹೊಸ ವರ್ಶನ್ ಕೆಳಗಿಳಿಸೋ ಮಹತ್ಕಾರ್ಯನೂ ಆಯ್ತು. ಅದಾದ್ ತಕ್ಷಣ ಇನ್ನು ಬರ್ದೇ ಬಿಡ್ತೀನಿ ಅನ್ನೋ ಹುಮ್ಮಸ್ಸಿನಲ್ಲಿ ಬ್ಲಾಗಿಗೆ ಲಾಗ್ ಆದ್ರೆ ಹುಹ್! ಕನ್ನಡ ಹೋಗಿ ಚಿತ್ರಾನ್ನ ಆಗ್ಬಿಡೋದಾ! ಬರಹ ಡೈರೆಕ್ಟ್ನಲ್ಲಿ ಯುನಿಕೋಡ್ನಲ್ಲಿ ಅಫೀಸ್ನಲ್ಲಿ ಕುಟ್ಟಿ ಕುಟ್ಟಿ ಬಿಸಾಕ್ತಿದ್ದದ್ದು ಮನೇನಲ್ಲಿ ಏನಾಯ್ತು ಅಂತ ಎಷ್ಟು ತಲೆ ಕೆಡ್ಸ್ಕೊಂದ್ರೂ ಗೊತ್ತಾಗ್ಲಿಲ್ಲ! ಆರ್ಕಟ್ ಕನ್ನಡ ಕಮ್ಮ್ಯೂನಿಟಿ, ಸಂಪದ, ಭಾಷಾಇಂಡಿಯಾ - ಹೀಗೆ ಸ್ನೇಹಿತರ ಸಲಹೆ ಮೇರೆಗೆ ಎಲ್ಲಾ ಕಡೆ ತೀರ್ಥಯಾತ್ರೆ ಹೋಗ್ಬಂದಿದ್ದಾಯ್ತು, ಕನ್ನಡಪ್ರೇಮಿ ಮಿತ್ರರಿಗೆ sos ಹಾಕಿದ್ದಾಯ್ತು, ಇಂಡಿಕ್ ಫಾಂಟ್ಸ್ ಮಣ್ಣು ಮಸಿ ಅಂತೆಲ್ಲ ಕೆಳಗಿಳ್ಸಿದ್ದಯ್ತು, ನಮ್ಮ್ ಬರಹ ಮಾತ್ರ ಕನ್ನಡ ಬರೀ ಒಲ್ಲ್ದು! ಏನ್ ಸಮಸ್ಯೆ ಅಂತನೇ ಗೊತ್ತಾಗ್ತಿಲ್ಲ!
ಕನ್ನಡ, ಇಂಗ್ಲಿಷ್ - ಎರಡು ಭಾಷೆಲೂ ಬರಿಯೋ ನನಗೆ ಕನ್ನಡ ಕೈಗೆಟುಕದಂತಾದಾಗ ಇಷ್ಟು ಕಸಿವಿಸಿಯಾದದ್ದು ನನಗೇ surprise! ಇನ್ನೇನು frustration ಪರಮಾವಧಿ ಮುಟ್ಟೋ ಹೊತ್ತಿಗೆ ಒಂದು ತಣ್ಣನೆಯ ರಾತ್ರಿ ನನ್ನ್ ತಲೆ ಬಿಸಿಯಾಗಿ ಬ್ಲಾಸ್ಟ್ ಆಗೋ ಮುಂಚೆ ನನ್ನ್ ತಮ್ಮನಿಗೆ ಬ್ರೌಸರ್ ಬದಲಿಸೋ ಐಡಿಯಾ ಠಕ್ಕಂತ ಹೊಳೆದಿದ್ದು ಕನ್ನಡಮ್ಮನ್ blessingsಏ ಅಂತ ಈಗ ಅನ್ನ್ಸುತ್ತೆ! ಹಿಂದಿನ ಪೋಸ್ಟ್ನಲ್ಲಿ ಹೇಳಿದ್ ಹಾಗೆ ಎಕ್ಸ್ಪ್ಲೋರರ್ ಬಿಟ್ಟು ಒಪೆರನಲ್ಲಿ ಬ್ಲಾಗಿಗೆ ಬಂದಾಗ ಕನ್ನಡ ಲಿಪಿ ಮುದ್ದಾಗಿ ಅರಳಿ ಮುಖದಲ್ಲಿ ಹೂನಗೆಯೊಂದನ್ನ ಮಿಂಚಿಸಿಬಿಟ್ಟ್ವು!
ಆಗ ಬರೀತೀನಿ ಅನ್ಕೊಂಡದ್ದನ್ನ ಬರ್ಯೋಕೆ ವಾರಕ್ಕ್ ಮೇಲೆ time ತೊಗೊಂಡಿದ್ದು ನಿಜ. ಆದ್ರೆ ಬರ್ಯಕ್ಕಾಗ್ದೇದ್ದಾಗ ಚಡಪಡಿಸಿದ್ದೂ ನಿಜ! ಒಲ್ಲೆ ಅಂದ ಹುಡುಗಿ ಹಿಂದೆ ಓಡೋ ಹುಡುಗ ಹುಡುಗಿ ಒಂದು glance ಕೊಟ್ಟ್ಬಿಟ್ಟ್ ತ್ತಕ್ಷಣ ಇಲ್ಲ್ದೇರೋ ಜಂಭಾನೆಲ್ಲಾ ಮುಖದ್ ಮೇಲೆ ಮಿಂಚಿಸೋ ಹಾಗೇನೋ!:) (ok guys, granted, the reverse is also true!)
Saturday, March 11, 2006
ಗೆದ್ದುಬಿಟ್ಟೆ!!!
ಬರಹ ಯುನಿಕೋಡ್ ಬಳಸಲು ಎಲ್ಲರೂ ಕೊಟ್ಟ ಸಲಹೆಗಳನ್ನ ಒಂದಾದಮೇಲೊಂದು try ಮಾಡೀ ಮಾಡೀ ಸೋತು ಸುಣ್ಣವಾಗಿ ಇನ್ನೇನು ಧರಾಶಾಯಿಯಾಗೋದ್ರಲ್ಲಿದ್ದೆ, ನನ್ನ್ ತಮ್ಮ
ಅಪರೂಪಕ್ಕೊಂದು ಒಳ್ಳೇ ಸಲಹೆ ಮುಂದಿಟ್ಟ - ಬ್ರೌಸರ್ ಬದಲಿಸಿ ನೋಡು ಅಂತ! ಒಪೆರನಲ್ಲಿ ಪ್ರಯತ್ನಿಸಿದ ತಕ್ಷಣ ಬಂದುಬಿಡ್ತು ನಮ್ಮ ಕನ್ನಡದ ಮಲ್ಲಿಗೆ ಹೂವು, ಮುತ್ತಿನ ಸಾಲು!
ತವಿಶ್ರೀಯವರಿಗೆ, ಸುಶೀಲ್ ಗೆ,ಶ್ರೀ(ಏನ್ಸಮಾಚಾರ!)ಗೆ,alwaysvettiಗೆ ಸಲಹೆಗಳಿಗಾಗಿ, ಮಾರ್ಗದರ್ಶನಕ್ಕಾಗಿ ಧನ್ಯವಾದಗಳು:)
ಹುಹ್! ತುಂಬಾ ಹಸಿವಾದಾಗ ಏನನ್ನೂ ತಿನ್ನೋಕಾಗಲ್ಲ! ಏನ್ ಬರಿಯೋದಕ್ಕೂ ಆಗ್ತಿಲ್ಲ - ತಲೆಯಲ್ಲಿ ಐಡಿಯಾಗಳು ತಕಧಿಮಿ ನಡ್ಸಿವೆ!
ಈ ಅನುಭವದ್ ಬಗ್ಗೆನೇ ಮೊದಲು ಬರೀಬೇಕು! ಸುಧಾರಿಸ್ಕೊಂಡು ಬರೀತೀನಿ!:)
Tuesday, March 07, 2006
SOS!
yaaraadrU kannadabhaktaru daari tOrsipaa!