Showing posts with label ಕವಿತೆ?. Show all posts
Showing posts with label ಕವಿತೆ?. Show all posts

Friday, June 12, 2015

ನದಿ ಹೆಸರ ಹುಡುಗಿ

ಹರಿಯುವುದೇ ಹಾಡು, ಪಾಡು.

ತುಂಬಿ, ಭೋರ್ಗರೆದು

ಧುಮುಕಿ, ಬಾಗಿ, ಬಳುಕಿ

ಪಾತ್ರವಿದ್ದಲ್ಲಿ ಹೆಜ್ಜೆ...

ಸೊರಗಿದರೂ ಕರಗದೇ,

ಸಿಕ್ಕ ದಡಕ್ಕೊಂದು ಮುತ್ತು

ಬದಿಯ ಗಿಡಕ್ಕೆ ಜೀವಸೆಲೆ...

ಮತ್ತೆ,

ಹರಿಯುವುದೇ ಹಾಡು, ಪಾಡು,

ಸಾಗರದ ವರೆಗೆ

Wednesday, February 25, 2015

ತುಂತುರು ಹಾಡಿತ್ತು,
ಭೋರ್ಗರೆವ ಸುರಿಮಳೆಯಿತ್ತು,
ಉಕ್ಕಿ ಹರಿವ ನದಿಯಿತ್ತು...
ಮೆಲ್ಲನೇಳುವ ಹಬೆಯಲ್ಲೂ
ನಿನ್ನ ನಗುವಿತ್ತು...

ಈಗಿಲ್ಲಿ ಹೆಪ್ಪುಗಟ್ಟಿದ ಮಂಜು
ಮುಟ್ಟಿದ ಬೆರಳಿಗೂ ಮರೆತ ಭಾವಗಳು...
ಸೂರ್ಯನ ಕನಸೂ ಸುಳಿಯದ ಈ ಶಿಶಿರ

Monday, February 23, 2015

ಆಗೀಗ ಗೀಚಿ ಮರೆತ ಸಾಲುಗಳು, ಡ್ರಾಫ್ಟ್ ಫೋಲ್ಡರಿಗಿವತ್ತು ಒಂದಿಷ್ಟು ಮೋಕ್ಷ


ನಿನ್ನ ನೆನೆಯುತ್ತಾ
ಸಣ್ಣ ಹನಿ ಮಳೆ
ಗರಿ ಬಿಚ್ಚುತ್ತಿರುವ ನವಿಲು
ಒದ್ದೆ ನೆಲ
ಮಳೆ ಗಂಧ
ಅಲ್ಲೊಂದು ಕಾರ್ಮೋಡ
ಮತ್ತೆ ಗುಡುಗು
ನಡುಗುವ ಒದ್ದೆ ಹಕ್ಕಿ


ಒಂದಿಷ್ಟು ಮೋಡದ ತುಣುಕು,
ಚಂದ್ರನ ಚೂರು,
ಚಹಾ ಬಟ್ಟಲಿನಿಂದೇಳುತ್ತಿರುವ ಹಬೆ...
ನಕ್ಷತ್ರಗಳ ಹುಡುಕಬೇಕಿದೆ,
ಬಂದುಬಿಡು


ನಿನ್ನ ದನಿ ಕೇಳದ
ಈ ಕ್ಷಣಕ್ಕೆ
ಎದೆಯ ಸದ್ದುಗಳನ್ನಡಗಿಸುವ
ಅಬ್ಬರದಲೆಗಳ
ಸಮುದ್ರಸಾನ್ನಿಧ್ಯದ ಬಯಕೆ
,




Saturday, November 30, 2013


’ಲವ್ ನೋಟ್‌’ಗಳು-೩'

ಮೊದಲ ಮಳೆ, ಹುಣ್ಣಿಮೆ ರಾತ್ರಿ, ಹೂವರಳುವ ಸಮಯಕ್ಕೆಲ್ಲಾ

ಯಾರು ಬೇಕಾದರೂ ನೆನಪಾಗಬಹುದು.

ಕಲಾಸಿಪಾಳ್ಯದ ಕೊಚ್ಚೆಯಲ್ಲೂ

ಕಿರುನಗೆಯಾಗಿ ನೀ ಬಂದುಬಿಟ್ಟಾಗ ಮಾತ್ರ,

ಹಳ್ಳಕ್ಕೆ ಬಿದ್ದಿದ್ದು ಕನ್ಫರ್ಮ್ಉ!


*************************************

ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು....*

ತಿಂಗಳಿಗೊಂದು ಹುಣ್ಣಿಮೆ ;)

( with due apologies to ಶ್ರೀ ಎಂ ಎನ್ ವ್ಯಾಸರಾವ್)


*************************************

Wednesday, September 16, 2009

ಮಳೆಯ ಕನಸು

ನಿಂತು ಬೇಸತ್ತು
ಹಳೆಯ ಹೊಳವುಗಳಲ್ಲಿ
ಹರಿಯಬಿಡಬೇಡ;
ಇಳಿ ವರ್ಷಧಾರೆಯಾಗಿ,
ನಿನ್ನ ನಿರೀಕ್ಷೆ
ಹೊಸಹಸಿರಿಗೆ
ಉಸಿರಾಗುವ ಕನಸಿನಲ್ಲಿ...

ಕೀಲಿಮಣೆಯ ಮೇಲೆ ಸವಾರಿ...
ಸುರಿದ ಮುಸಲಧಾರೆಗೆ
ಫಟ್ಟೆಂದ ಟ್ರ್ಯಾನ್ಸ್‌ಫಾರ್ಮರ್!
ಕತ್ತಲ ಮಳೆಯಲ್ಲಿ
ಕವಿತೆ ಮಲಗಿತು
ಕನಸು ಬಿತ್ತಾ?
ಗೊತ್ತಿಲ್ಲ!

Monday, August 24, 2009



ಕನಸು? ಆಕಾಂಕ್ಷೆ?
ಹೊಸ ಬೆಳಗು,
ಗೆಲುವಿಗೆ
ನಕ್ಷತ್ರಲೋಕಕ್ಕೆ ಏಣಿ...

ಸುರಿದ ಮಳೆಗಳು?
ಗಾಳಿ - ಬಿಸಿಲು?
ಹೊಸ ಅಲೆಯ ದಾಪುಗಾಲು?
ನಡುಗಿದ ಒಡಲು
ಸೀಳಿ ಬೆಳೆದ ಹುಲ್ಲು...
ಜೀವ ಕುಸಿದು
ಕಳೆದುಳಿದದ್ದು
ನಾಳೆಗೆ ನಿನ್ನೆಯ ನೆನಪು;
ಕಳೆದ ಸಾವಿರ ಕನಸುಗಳ
ಭದ್ರ ಬುನಾದಿ.

ಕಣ್ಣೆತ್ತಿ
ಕತ್ತಲವರೆಗೆ
ಕಾದರೆ ಮತ್ತೆ ನಕ್ಷತ್ರಲೋಕ
ಝಗಮಗ.
ಮರುಬೆಳಗಿಗೆ
ತೊಳೆದು ಕವಚಿದ ಆಕಾಶ

Sunday, July 05, 2009

ಕಳೆದ ಬೇಸಿಗೆ

ಕಳೆಯದ ಹಳೆ ಹಾಡುಗಳು
ಒಂದಷ್ಟು ಹಳೆ ಮುಖಗಳು
ಬೇಕಾದ್ದು - ಬೇಡದ್ದು
ಕಸ-ಕಡ್ಡಿ ಉರುವಲು
ಸಣ್ಣಗೆ ಬೆಂಕಿ
ತಣ್ಣಗೆ ಕಳೆದ
ನೀನಿರದ ಬೇಸಿಗೆಯ ಸಂಜೆಗಳು


Monday, September 29, 2008

’ಲವ್ ನೋಟ್‌’ಗಳು-೨

ನೀ ಅಡ್ಡಗೋಡೆಯ ದೀಪವಾದರೆ
ನಾ ಗಾಳಿಯಾಗಿಬಿಡ್ತೀನಿ;)

ಚಂದ್ರನಿಲ್ಲದ ರಾತ್ರಿ ಅನ್ನಿಸ್ತು
ಬೆಳದಿಂಗಳು ಬಿಸಿಲಾಯ್ತಾ ಅಂತ ಗುಮಾನಿ ಬಂತು
ಇನ್ನೊಂದು ಚಂದಿರ ಕಾಣಿಸೋ ಮುಂಚೆ
ನೀನೇ ಬಂದುಬಿಡು;))

(ಖಂಡಿತಾ ಇವತ್ತು ಬರೆದಿದ್ದಲ್ಲ :)) )

Saturday, July 26, 2008

ಮನದ ಮುಗಿಲಿನಲ್ಲಿ

ನೆನಪಿಗೊಂದು ಕಿರುನಗೆ
ಕನಸಿಗಿನ್ನೊಂದೆರಡು ಸುಳಿಮಿಂಚು...
ಹುಸಿಕೋಪದ ಹೊಗೆ, ಹೊಯ್ದಾಟ
ಗಲಿಬಿಲಿ ಹಕ್ಕಿಗೂಡು
ಇನ್ನೊಂದಷ್ಟು ತಲ್ಲಣ
ಕಣ್ಣಂಚಿಗೇ ಬಂದು ನಿಲ್ಲುವ ಕವಿತೆ...
ಇಷ್ಟೆಲ್ಲ ತುಂಬಿಕೊಳ್ಳಲು
ಮೌನದರೆಚಣ!

ಎಲ್ಲ ಕರಗಿ
ದಳದಳದಿ ನಳನಳಿಸಿ
ಅರಳಲು
ಒಂದು ಹೂನಗೆ
ತುಂತುರು ನೀರ ಹಾಡು

Sunday, June 22, 2008

’ಲವ್ ನೋಟ್’‌ಗಳು

೧೫X೪೦ ಸೈಟಿನ ಎರಡನೇ ಮಹಡಿಯಲ್ಲಿ
ಆಗೊಂದು ಈಗೊಂದು ಅರಳೋ ಜಾಜಿ ಹೂವು

ಹಳೆಯ ಕಡತಗಳಲ್ಲಿ ಕಳೆದುಹೋಗಬಿಡಬೇಡ
ಬೇಗ ಫೈಲ್ ಪಾಸ್ ಮಾಡು

ಪ್ಲಾನೆಟೇರಿಯಂ ಸರ್ಕಸ್
ಅಡ್ವೆಂಚರ್ ಪಾರ್ಕು ನೋಡಾಯ್ತು
ಮನೆಗೆ ಹೋಗೋದು ಯಾವತ್ತು?

ಕನಸು ಮಾರುವ ಚೆಲುವ ಹಾಡ ನಿಲ್ಲಿಸಬೇಡ*
ನಿಲ್ಲಿಸೋ ಪ್ಲ್ಯಾನ್ ಇದ್ರೆ ಹಾಡೋಕೇ ಹೋಗಬೇಡ!

ಹೂವಿಂದ ಹೂವಿಗೆ ಹಾರುವ ದುಂಬಿ*
ಹೊಸ ಇನ್ಸೆಕ್ಟಿಸೈಡ್ ತಂದಿಟ್ಟಿದೀನಿ

(ಇದನ್ನ ಕವಿತೆ ಅಂತಲೋ ಚುಟುಕ ಅಂತಲೋ ಖಂಡಿತಾ ಕರಿಯೋಕಾಗಲ್ಲ, ಗೊತ್ತು:)) ಸ್ವಲ್ಪ ತರಲೆ ಮೂಡ್ ಇದ್ದಾಗ ಬರೆದಿರೋ ಸಾಲುಗಳು ಅಷ್ಟೇ, ತುಂಬಾ ಚೆನ್ನಾಗಿವೆ ಅನ್ನೋ ಭ್ರಮೆ ನನಗೇ ಇಲ್ಲ... ಸೋ ನೀವು ಬಲವಂತ್ವಾಗಿ ’ಚೆನ್ನಾಗಿದೆ’ ಅನ್ಬೇಡಿ, ನಿಮಗೆಲ್ಲ ನನ್ನ ಮೇಲೆ ಪ್ರೀತಿ ಇದೆ ಅಂತ ಗೊತ್ತು!:) )
*ಮೂಲ ಕವಿಗಳ ಕ್ಷಮೆ ಯಾಚಿಸುತ್ತಾ...

Monday, April 21, 2008

ನದಿ-ದಡ

ನದಿ ದಡ ದಡ ನದಿ

ನದಿ ನದಿ ನದಿ ದಡ

ದಡ ದಡ ನದಿ ದಡ

ಹಾರುತ್ತ ನಿಲ್ಲುತ್ತ

ನಿಲ್ಲುತ್ತ ಹಾರುತ್ತ

ಹರಿಯೋದು ನದಿಯೋ ದಡವೋ?

ನಿಲ್ಲೋ ನೆಲೆ ದಡವೋ ನದಿಯೋ?

ಉತ್ತರ ಮರೆತ ಪ್ರಶ್ನೆಗಳಲ್ಲಿ

ಗೆಲುವು ಕಳೆದಿದೆ

Thursday, February 28, 2008

ಮತ್ತೆ ಸುತ್ತುತ್ತಾ

ಭರವಸೆಗಳಿಗೆ ರಜಾ ಕೊಟ್ಟುಬಿಡಬೇಕು
ಕನಸುಗಳನ್ನ ಗುಡಿಸಿ ಬಿಸಾಕಿಬಿಡಬೇಕು
ತಣ್ಣಗಿದ್ದುಬಿಡಬೇಕು
ಬೇಕು ಬೇಕು ಬೇಕು ಬೇಕು
ಫೀನಿಕ್ಸುಗಳು ಮತ್ತೆ ಎದ್ದು ಕೂತವು
ಭಸ್ಮಾಸುರನ ಬೂದಿಯಿಂದೆದ್ದ ಮೋಹಿನಿಯರು
ಕಣ್ಣಲ್ಲಿ ನಾಕು
ಕನಸಲ್ಲಿ ಎಂಟು
ಒಂದು ಬೂದಿಗೆ ಎರಡು ಹಕ್ಕಿ ಫ್ರೀ -
ಕನಸೀಗ ರಕ್ತಬೀಜಾಸುರ.
ಯಾರಪ್ಪನ ಮನೇ ಗಂಟು,
ಕನಸಿಗೇನು ಕಾಸೇ?!
ಮತ್ತೆ ಸುತ್ತುತ್ತಾ
ಸರಿ, ಬನ್ನಿ, ಕುಕ್ಕಿ ಎಂದೆ
ಮತ್ತೆ ಸುಡುತ್ತಾ

Friday, February 01, 2008

ಕಳೆಯದ ನಿನ್ನೆ
ಕೈಜಾರಿದ ನಾಳೆಗಳ ನಡುವೆ
ನಿಟ್ಟುಸಿರೊಂದಕ್ಕೆ
ನಿದ್ದೆಗೊಮ್ಮೆ ನಿತ್ಯಮರಣ
ಎದ್ದ ಸಲ ನವೀನ ಜನನ!

(ಕನ್ನಡ ಬ್ಲಾಗ್ ಲೋಕದ ಲೇಟೆಸ್ಟ್ ಸಾಂಕ್ರಾಮಿಕ - ಚುಟುಕರೋಗ, ಇದನ್ನು ಕವಿತೆಯಾಗಿ ಬೆಳೆಸದ ನನ್ನ ಸೋಮಾರಿತನಕ್ಕೆ ಎಕ್ಸ್‌ಕ್ಯೂಸ್!)

Thursday, January 10, 2008

ಹಣತೆಗೆ...

ಜೀವನೋತ್ಸಾಹ ಇದೆ ಅಂತ ಟವರ್ ಹತ್ತಿ ನಿಂತು ಕೂಗೋ ಅವಶ್ಯಕತೆ ಏನಿದೆ? ಇದೆ ರೀ, ಒಳಗೇ ಎಲ್ಲೋ ಸೋರಿಹೋಗುತ್ತಿರೋ ಭಾವಕ್ಕೆ, ಸೋರದಂತೆ ನಿಲ್ಲಿಸಲು ತುಂಬಿಕೊಳ್ಳಬೇಕಿರೋ ಚೈತನ್ಯಕ್ಕೆ...

ಸುತ್ತೆಲ್ಲ ಬಣ್ಣದಲೋಕ, ಕಾಯುತ್ತಿರೋ ನೂರು ನಲಿವು-ನೋವು...
ಒಳಗೆ ಬಿರುಗಾಳಿಗೆ ಸಿಕ್ಕ ಕಿರುಹಣತೆಯ ಭಾವ ಯಾಕೋ!ಉಸಿರುಕಟ್ಟಿಸುವಂಥ ಸ್ತಬ್ಧತೆಯೂ ಅಲ್ಲೇ! ಎಲ್ಲದರ ನಡುವೆ ಏನೂ ಆಗದಂತೆ ಕೂರುವ ವಿಗ್ರಹವಾಗೋ ಯಾವ ಹಂಬಲಗಳೂ ಇಲ್ಲ, ರತ್ನಖಚಿತ ಕಿರೀಟ ವಿಗ್ರಹಕ್ಕೇ ಇರಲಿ.
ಸಿನಿಕತನ ನುಸುಳದಂತೆ, ಕಿರುಹಣತೆ ಆರದಂತೆ ಕಾಯುವುದೊಂದೇ ಹಂಬಲ...
ಅದಕ್ಕೇ ಈ ಕೂಗು...ಇರಬಹುದು!

ಕ್ಲೀಷೆ ಅನ್ನಿಸಿದ್ರೂ ಈ ಕ್ಷಣದ ಹಾಡು ಅದೇ...
ದೀಪವು ನಿನ್ನದೇ ಗಾಳಿಯೂ ನಿನ್ನದೇ...
ಆರದಿರಲಿ ಅಂದುಕೊಂಡರೆ ಸಾಕೇನೋ, ಗಾಳಿ ಮಾತು ಕೇಳಬಹುದು! ಅಥವಾ ದೀಪವೇ ಸೆಟೆದು ನಿಲ್ಲಬಹುದು!

ಹಣತೆಯಾರಿದರೆ
ನೋವೇನು ನಲಿವೇನು
ಕತ್ತಲೆಯ ತುಣುಕುಗಳು
ಸವೆಸಿ ಮರೆಯುವ ಹಾದಿಕಲ್ಲುಗಳು...
ಬದುಕೆ?

ಕತ್ತಲೆಯ ಗುಡಿಯಲ್ಲಿ
ಶ್ರೀಮೂರ್ತಿ ಕಂಗೊಳಿಸೆ
ಬೇಕೊಂದು ಪುಟ್ಟ ಹಣತೆ
ಕಲ್ಲಿನಲಿ ಕಾಯುವನ ತೋರಿ
ನಮಿಸೆ