Sunday, July 27, 2008

ಕನಸು ಕಸಿಯುವ ಕ್ಷಣಗಳು

ಊಟ ಮಾಡ್ತಾ ತೆಪ್ಪಗೆ ಸ್ಟಾರ್ ವಾಯ್ಸ್ ಆಫ್ ಇಂಡಿಯಾ ನೋಡೋದು ಬಿಟ್ಟು ಯಾರೋ ಕೆಟ್ಟದಾಗಿ ಹಾಡಿದ್ರು ಅಂತ ಚಾನಲ್ ಬದಲಿಸಿದ್ದು ತಪ್ಪಾ? ಗೊತ್ತಿಲ್ಲ! ಬೆಂಗಳೂರಲ್ಲಿ ಬಾಂಬ್ ಸರಣಿಯ ಸದ್ದಿನ್ನೂ ಅಡಗೋಕೆ ಮುಂಚೆ ಅಹಮದಾಬಾದಿನಲ್ಲಿ ಮಾರ್ದನಿಸಿದ್ದು ನೋಡ್ತಾ ಗಂಟಲಲ್ಲಿ ಅನ್ನ ಇಳೀಲಿಲ್ಲ...ಹೇಗೋ ತುರುಕಿ ನೀರುಕುಡಿದು ಎದ್ದಿದ್ದಾಯ್ತು... ೨೮ ಜೀವಗಳು...ಯಾರೋ ಏನೋ... ಅವುಗಳ ಸುತ್ತ ಕಟ್ಟಿಕೊಂಡಿದ್ದ ಬದುಕುಗಳಿನ್ನೆಷ್ಟೋ....
ಇನ್ನೂ ಉಸಿರುಕಟ್ತಿದೆ... ಒಳಗೆಲ್ಲ ಕಲಸಿದಂತೆ...ಕಣ್ಣೀರು ಕಟ್ಟೆ ಒಡೆದು ಹರಿಯೋಕೆ ಕಾಯ್ತಿದೆ...
ಹಿಂಸೆ ಹೇಗೆ ಸಾಧ್ಯವಾಗುತ್ತೆ ಅನ್ನೋ ಪ್ರಶ್ನೆ ಮತ್ತೆ ಕಾಡ್ತಿದೆ...

ತಿಂಗಳ ಹಿಂದೆ ಓದಿದ ಖಾಲಿದ್ ಹೊಸೇನಿಯ ’ಕೈಟ್ ರನ್ನರ್’, ’ಎ ಥೌಸೆಂಡ್ ಸ್ಪ್ಲೆಂಡಿಡ್ ಸನ್ಸ್’, ಅಫ್ಘಾನಿಸ್ತಾನದ ಹಿಂಸೆಯ ಸರಮಾಲೆಯ ಕಥೆಗಳಿಂದ ಮನಸ್ಸನ್ನ ಕಲಕಿಬಿಟ್ಟಿದ್ವು... ಅದೇ ಹೊತ್ತಿಗೆ ಅಲ್ಲಿನ indian embassyಯ ಮೇಲಿನ ಧಾಳಿ, ಅದರ ಹಿಂದೆ ಪತ್ರಿಕೆಗಳಲ್ಲಿ ಬಂದ ಅಫ್ಘಾನಿಸ್ತಾನದ ಕಣ್ಣೀರಿನ ಕಥೆಗಳೊಂದಿಷ್ಟು ಓದಿ ಅಯ್ಯೋ ಪಾಪ ಅನ್ನುವಾಗ ಈ ಪ್ರಶ್ನೆಗಳಿದ್ದರೂ, ಇಲ್ಲಿ ಬೆಚ್ಚಗೆ ಕೂತು ಅಯ್ಯೋ ಅನ್ನುವ ಸಾಧ್ಯತೆಯ ಬಗ್ಗೆ ಒಂದಿಷ್ಟು ನೆಮ್ಮದಿಯೂ ಸೇರಿತ್ತೇನೋ...ಈಗ ಪ್ರಶ್ನೆಗಳೆಲ್ಲ ಪುಸ್ತಕದಾಚೆ, ನನ್ನದೇ ನೆಲಕ್ಕೆ, ಮನೆಯ ಬಾಗಿಲಿಗೇ ಬಂದು ಕೂತಿವೆ!

ಬದುಕಿಗಾಗಿ ನಂಬಿಕೆಗಳು, ಆಸೆಗಳು, ಗುರಿಗಳು... ಬದುಕನ್ನೇ ನುಂಗಬಲ್ಲಷ್ಟು ಹೇಗೆ ಇವೆಲ್ಲ ಬಲಿಯುತ್ವೆ, ಎಲ್ಲಿ ಬಲಿಯುತ್ವೆ ಅರ್ಥಾನೇ ಆಗೋಲ್ಲ ನನಗೆ...

ಅಮಿತಾವ್ ಘೋಷರ ಶ್ಯಾಡೋ ಲೈನ್ಸ್‌ನಂತೆ ಗೆರೆ-ಗೆರೆಗಳೊಳಗೆ ಭಾಗವಾಗುತ್ತ ನಮ್ಮನ್ನೇ ತುಂಡು ತುಂಡಾಗಿಸಿಕೊಳ್ಳೋದರ ಬಗ್ಗೆ ಆತಂಕವೆನ್ನಿಸುತ್ತೆ... ಜೊತೆಗೇ ಆತಂಕದ ಕ್ಷಣಗಳಲ್ಲಿ ಸಿಕ್ಕ ಆಟೋ ಹತ್ತಿ ಲೈಸೆನ್ಸ್ ಪ್ಲೇಟಿನಲ್ಲಿರೋ ಹೆಸರು, ಊರು ನೋಡಿ ಗಾಬರಿಯಾಗೋ ಕ್ಷಣಗಳಲ್ಲಿ ನಮ್ಮ ಅರಿವಿಲ್ಲದೇ ದಟ್ಟವಾಗಿಸೋ ಗೆರೆಗಳ ಬಗ್ಗೆ ಇನ್ನಷ್ಟು ಆತಂಕ, ನಾಚಿಕೆ, ಕಸಿವಿಸಿ... ಮನುಷ್ಯತ್ವ ಅಷ್ಟು vulnerable ಆಗ್ತಿದೆಯಾ ಅನ್ನಿಸುತ್ತೆ... ಬೆಂಗ್ಳೂರಲ್ಲಿ ಬಾಂಬ್ ಸಿಡಿದು ಒಂದು ಘಂಟೆಯೊಳಗೆ ’ಇಬ್ರೇ ಅಂತೆ ಮ್ಯಾಮ್ ಸತ್ತಿದ್ದು’ ಅನ್ನುವ ೮ರ ಪುಟ್ಟಿಯ ಮಾತು ಕೇಳ್ತಾ ಕನಸುಗಳಿಗೆ ಕಸುವು ಕಮ್ಮಿಯಾಗಿಬಿಟ್ಟ ಭಾವ...

8 comments:

ಶಾಂತಲಾ ಭಂಡಿ said...

sree...
"ಈಗ ಪ್ರಶ್ನೆಗಳೆಲ್ಲ ಪುಸ್ತಕದಾಚೆ, ನನ್ನದೇ ನೆಲಕ್ಕೆ, ಮನೆಯ ಬಾಗಿಲಿಗೇ ಬಂದು ಕೂತಿವೆ!"
ಎಲ್ಲಿಯೋ ಸಿಡಿದ ಬಾಂಬ್ ಸದ್ದು ಮನವನ್ನ ಸವರಿ ಹೋಗುತ್ತಷ್ಟೇ. ನಮ್ಮ ಮನೆಯದೇ ಬಾಗಿಲ ತಟ್ಟುವ ಚಿಕ್ಕ ಸದ್ದೂ ಸಹ ಒಮ್ಮೊಮ್ಮೆ ಬೆಚ್ಚಿಬೀಳಿಸಬಹುದು, ಮನವನ್ನು ತಟ್ಟಿ ಅಲುಗಿಸಿ ತಲ್ಲಣಗೊಳಿಸಬಹುದು ಅಲ್ವಾ?
ಅಲ್ಲಿ ಸಿಡಿದಂಥ ಬಾಂಬ್ ಎಷ್ಟೊತ್ತಿಗೆ ಇನ್ನೆಲ್ಲಿ ಸಿಡಿಯಲಿದೆಯೋ ಎಂಬೊಂದು ಸತ್ಯವೇ ಸಾಕು...ಜೀವಭೀತಿ. ನನ್ನವರು ನನ್ನ ನೆಲವೆಂಬ ಪ್ರೀತಿಗೆ ಒಳಗೊಳಗೇ ಆತಂಕ ಎಲ್ಲಿದ್ದರೂ.

Lakshmi S said...

ಜೀವಗಳಿಗೆ ಬೆಲೆಯಿಲ್ಲದಂತಾಗಿರುವುದು ನಿಜವಾಗಿಯೂ ಶೋಚನೀಯ.

Harish - ಹರೀಶ said...

ಜಗತ್ತು ಎತ್ತ ಸಾಗುತ್ತಿದೆಯೋ.... ದೇವರೇ ಬಲ್ಲ

SHREE (ಶ್ರೀ) said...

Idu elavu deep agi noDidare ello ondu kaDe nave maDikonDiddu... there is more to come.

Susheel Sandeep said...

ಯಾವ್ದೋ ಚಿತ್ರದ ಟ್ಯಾಗ್ಲೈನ್ ನೆನಪಾಯ್ತು - ಇದು ಅಂತ್ಯ ಅಲ್ಲ ಆರಂಭ!
ನಿಜ, ನೆಮ್ಮದಿಯ ಮೊಟ್ಟೆಯೊಳಗೆ ಬೆಚ್ಚನೆಯ ಭಾವದಲ್ಲಿ ಮಲಗಿದ್ದವರಿಗೆಲ್ಲ ಎಚ್ಚರಿಕೆಯ ಅಲಾರ್ಮ್ ಇದು ಅಷ್ಟೇ!
ಕಡೆಗೆ ಆ ಎಂಟರ ಪೋರಿಯಂತೇ 'ಸತ್ತಿದ್ದು ಬರೇ ಇಬ್ಬರಂತೆ' ಅನ್ನೋ ನಿರ್ಲಿಪ್ತತೆ!

sunaath said...

sree,
ಈ ಜಗತ್ತಿನಲ್ಲಿ ಹಿಂಸೆ ಅನಾದಿ ಕಾಲದಿಂದಲೇ ಇದೆ.ಹಿಂಸೆಯ ಪ್ರವಾದಿಗಳು ಇರೋವರೆಗೂ ಅಮಾಯಕರ ಜೀವನಕ್ಕೆ ಎಲ್ಲಿದೆ ಬೆಲೆ?

chetana said...

ನಮಸ್ತೇ,
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ನೀವು ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ.
ಖಂಡಿತ ಬರಲೇಬೇಕು.

ನಿಮಗಾಗಿ ಕಾದಿರುತ್ತೇನೆ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

mohan said...

Thumba chennagidhe madam...last 2 lines adhbuthavaagidhe ( sathidhu ibbare anthe)...noooraaru jana sayodh nodi nodi...ibru mooru jana hodhre yenu aage illa anno thara anisbidathe...yestu vichitra alva