Monday, October 29, 2007

ಮಿಡಿದೊಂದು ತಂತಿಗೆ...

ಸುಮ್ಮನೆ ಕಣ್ಣರಳಸಿ ನಡೆದು ಹೋಗ್ತಿರೋವಾಗ ಎಲ್ಲೋ ಯಾವುದೋ ತಂತಿ ಮಿಡಿದು ನಮ್ಮನ್ನ ಸೆಳೆದುಬಿಡೋದು ಯಾಕೋ... ಎಲ್ಲಿ ಹೋಗುತ್ತೆ ಅಂತ ತಿಳಿಯದೆಯು ಆ ಮಿಡಿತಕ್ಕೊಂದು ಪ್ರತಿಮಿಡಿತವಾಗಿ ಆ ಹಾದಿ ಹಿಡಿಯಹೊರಡೋದು ಯಾವ ಮಾಯೆಯೋ? ಬುದ್ಧಿ? ಭಾವ? ಮನಸ್ಸು? ನಮ್ಮ ಮಿಡಿತಗಳಿಗೆ ಪ್ರತಿಮಿಡಿತವೊಂದನ್ನು ಮನದ ಮೂಲೆಯಲ್ಲೆಲ್ಲೋ ನಮಗರಿವಿಲ್ಲದೆಯು ಅರಸುತ್ತಿರೋದು ಸ್ವಾರ್ಥನಾ? ಎಲ್ಲೋ ಅಂಥದ್ದೊಂದು ಕೇಳಿಸಿತೇನೋ ಅನ್ನೋ ಭಾವದಲ್ಲಿ ಕಣ್ಣುಮುಚ್ಚಿ ಆ ದಿಕ್ಕಿಗೆ ಓಡೋ ಅಷ್ಟು ಮೈಮರೆವು ಸ್ವಾರ್ಥಕ್ಕೆ ಸಾಧ್ಯವಾ?
ತರ್ಕಕ್ಕೆ ಮೀರಿದ ಭಾವದಲ್ಲಿ ಹಿಡಿದೊಂದು ಶ್ರುತಿಗೆ, ಮಿಡಿದೊಂದು ಹೊಸ ತಂತಿಗೆ ಒಂದು ಹಾಡು...

P.S.,: yU, mU ಎಲ್ಲ ಹೆಂಗ್ರಪ್ಪಾ ಬರಿಯೋದು? ಯಾರಾದ್ರು ದಯವಿಟ್ಟು ಸರೀಗೆ ಹೇಳ್ಕೊಡಿ... confuseಆಗಿಎಲ್ಲಾ yUಗಳ ಬಾಲ ಈ postನಲ್ಲಿ ಕತ್ತರಿಸ್ಬಿಟ್ಟಿದೀನಿ!

Sunday, October 14, 2007

ಕಳೆಯಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ

ನೀನಾಸಂ ಪಕ್ಕದ ’ಚರಕ’ದಲ್ಲಿ ಹಿಂದೆ ಓದಿ ಮೆಚ್ಚಿದ್ದ ಲೇಖಕಿ ನೇಮಿಚಂದ್ರರ ಇಲ್ಲಿಯವರೆಗಿನ ಕಥೆಗಳ ಸಂಗ್ರಹ ಕಣ್ಣಿಗೆ ಬಿತ್ತು. ’ಅಂಕಿತ’ದವರು ಹೊರತಂದಿರುವ ಈ ಸಂಗ್ರಹದಿಂದ("ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು", ೨೦೦೧) ಕೆಲವು ಕಥೆಗಳ ತುಣುಕುಗಳನ್ನ ಆಗೀಗ ಇಲ್ಲಿ ಹಂಚಿಕೊಳ್ಳೋ ಪ್ಲಾನ್ ಇದೆ. ಇಲ್ಲಿ ವಿಮರ್ಶೆಗಾಗಲೀ ಪೂರ್ತಿ ಕಥೆ ಹೇಳುವ ಗೋಜಿಗಾಗಲೇ ಹೋಗ್ತಿಲ್ಲ, ಸುಮ್ಮ್ನೆ ಕೆಲವು ಸಾಲುಗಳು...
ಸದ್ಯಕ್ಕೆ ’ಕಳೆಯಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ’:

ಕಳೆಯಬೇಕಿದೆ ನಿನ್ನ ಜೊತೆಯಲಿ
ಒಂದು ಶ್ಯಾಮಲ ಸಂಜೆ
ಬಾನು ಭುವಿಗಳ ಬಣ್ಣ ಬೆರೆಯುವ
ಒಂದು ಮೋಹಕ ಸಂಜೆ
ಕನಸು ನನಸಿನ ನಡುವಿನಂಚನು
ಅಳಿಸಿ ಹಾಕುವ ಸಂಜೆ
ಎದೆಯ ನೋವಿಗೆ ಕದವ ಹಾಕದೆ
ತೆರೆದು ತೋರುವ ಸಂಜೆ
ಕಣ್ಣ ಕತೆಗಳ ಬಿಡಿಸಿ ಹೇಳುವ
ಒಂದು ಕೋಮಲ ಸಂಜೆ
ನನ್ನ ನೋವಿನ ಅಂತರಾಳಕೆ
ನೀನು ಜಿಗಿಯುವ ಸಂಜೆ
ಹಿಡಿದು ಕೈಯನು ಬದುಕಿನೀಚೆಗೆ
ಎಳೆವ ಸಾಧ್ಯದ ಸಂಜೆ....

ಮತ್ತೆ ಗುಣುಗುಣಿಸಿದೆ... ’ಬದುಕಿನೀಚೆಗೆ ಎಳೆವೆ ಸಾಧ್ಯತೆ’ ಇತ್ತೆ? ಹೊರಟ ಅಹಲ್ಯೆಯನ್ನು ಹಿಡಿದು ನಿಲ್ಲಿಸಬಹುದಿತ್ತೆ? ನಮ್ಮಲ್ಲಿ ಒಂದು ಸಂಜೆ ಇತ್ತೆ ಅಹಲ್ಯೆಗಾಗಿ?


ಸಮಯದಲ್ಲೆಲ್ಲೋ ಕಳೆದುಹೋದ ಸ್ನೇಹ-ಸಂಬಂಧಗಳು.

"ಅಹಲ್ಯಾನ ನೋಡಿ ಕಲಿ, ಅವಳೂ ಫಸ್ಟ್ ಬರ್ತಾಳೆ, ರ್ಯಾಂಕ್ ಬರ್ತಾಳೆ, ಒಂದು ದಿನ ಎಗರಾಡಿದ್ದು ಕೇಳಿಲ್ಲ. ನಿನ್ನ ಬಾಯಿ ಊರಗಲ. ಎಲ್ಲಕ್ಕೂ ಯಾಕೆ, ಏನು, ಆಗೋಲ್ಲ ಅಂತಾನೇ ವಾದಿಸ್ತೀಯ... ಅದ್ಯಾವ ಗಳಿಗೇಲಿ ಸಾಗರಿಕಾ ಎಂದು ಹೆಸರಿಟ್ಟೆವೋ, ಸಮುದ್ರದ ಆರ್ಭಟ ಎಲ್ಲ ನಮ್ಮ ಮನೆಯೊಳಗೇ ನುಗ್ಗಿ ಬಂತು" ಅಮ್ಮ ಗೊಣಗುತ್ತಿದ್ದಳು.

ಮನಸ್ಸಿಗೆ ಸಮಾಧಾನವಿರಲಿಲ್ಲ. ಈ ಹುಚ್ಚಾಟದ ನಡುವೆ ಅಹಲ್ಯ ಎಲ್ಲಿಯೋ ಕಳೆದುಹೋಗುತ್ತಿದ್ದಾಳೆನಿಸಿತ್ತು. ಸುಖದ ಸುಳ್ಳಿನ ಜಾಲದಲ್ಲಿ ಸತ್ಯವನ್ನು ಮರೆಮಾಚುತ್ತಿದ್ದಾಳೆ, ವಾಸ್ತವವನ್ನು, ವರ್ತಮಾನವನ್ನು ನಿರಾಕರಿಸುತ್ತಿದ್ದಾಳೆನಿಸಿತು. ಈ ಬದುಕಿನಾಚಿನ ಸ್ವರ್ಗದ ಬಾಗಿಲು ತೋರಿಸಿ ಅವಳನ್ನಾಚೆಗೆ ಸೆಳೆವ ಭಯವಿತ್ತು. ... ಅವಳ ಅನುಭವಕ್ಕೆ ನಾ ಹೊರತಾಗಿದ್ದೆ. ನನ್ನ ಮಾತುಗಳೊಂದೂ ಅವಳನ್ನು ಸ್ಪರ್ಷಿಸುತ್ತಿರಲಿಲ್ಲ. ನಾ ತೋರುವ ಹಾದಿಗಳೆಲ್ಲ ಉದ್ದವಿದ್ದವು. ಸುಖದ ಗ್ಯಾರಂಟಿ ಕೊಟ್ಟ ಹಾದಿಗಳಲ್ಲ, ಹೋರಾಟದ ಹಾದಿಗಳು. ಆದರೆ ಗಟ್ಟಿ ನೆಲದ ಮೇಲೆ ಊರುವ ಹೆಜ್ಜೆಗಳವು. ಬದುಕಿನತ್ತ ಇಟ್ಟ ದಿಟ್ಟ ಹೆಜ್ಜೆಗಳು.

ಮನುಷ್ಯ ದ್ವೀಪವಾಗಿದ್ದ.... ಮತ್ತೆ ನೋಡಿದೆ ಹಿನ್ನೀರಿನತ್ತ. ಎಲ್ಲಿಯೋ ಅಹಲ್ಯೆಯ ದನಿ ಕೇಳಿಸಿತು. "ನೀ ಸಮುದ್ರ, ಪುಡಿಮಾಡಬಲ್ಲೆ ತೀರಕ್ಕೆ ಬಡಿ ಬಡಿದು ಬಂಡೆಗಳ... ನಾ ದಂಡೆಗಳ ನದುವೆ ಕಲ್ಲು ಬಂಡೆಗಳ ನಡುವೆ ಸಿಲುಕಿ ನಿಂತ ಹಿನ್ನೀರು. ನನ್ನ ಮಿತಿ ದಾಟಲಾರೆ..."

ಹಿನ್ನೀರ ಒಡಲಾಳದ ತಳಮಳ ನನಗೆ ತಿಳಿದಿತ್ತು. ಹೋದವರು ಮತ್ತೆ ಹಿಂತಿರುಗಿ ಬಾರರು. ಆದರೆ ಉಳಿಸಿಕೊಳ್ಳಬಹುದೇ ಉಳಿದವರನ್ನು? ಪ್ರಶ್ನೆ ಹೊತ್ತು ಹೊರಟೆ ಹೋಟಲಿನತ್ತ.

for a brief intro to the writer: http://www.deccanherald.com/Archives/dec21/artic6.asp

P.S.,: ಇಲ್ಲಿ ಬಂದು ಹತ್ತು ಸಾವಿರದ ಹಿಟ್ಟು ಕುಟ್ಟಿದವರಿಗೆಲ್ಲ ಧನ್ಯವಾದಗಳು!