Monday, October 06, 2008

ಬೆಳ್ಳಿ ಮಾತು ಬಂಗಾರದ ಮೌನಗಳ ನಿನಗೊಂದು ಕಿವಿಮಾತು

ಮೌನದ ಮೊರೆ ಹೊಕ್ಕ ಹುಡುಗ... ಹುಡುಗಿಗೆ ತಲೆಬಿಸಿ...
ಏನಾಯ್ತು, ಯಾಕೆ, ಯಾವಾಗ...
ಮನ ಗೊಂದಲದ ಬೀಡು.
ಏನು ಮಾಡೋದು? ಹೊರಗೆ ಹೋಗೋಣ್ವಾ?
ಸರಿ...
ಕಾಫಿಡೇನಲ್ಲೂ ಮತ್ತೆ ಕಪ್ಪಿಚಿಪ್ಪಿನೊಳಗೆ ತೂರಿದ ಹುಡುಗ.
ಲಾಂಗ್ ಡ್ರೈವ್? ಮತ್ತಷ್ಟು ಉದ್ದದ ಮೌನ...
ಇನ್ನೆಷ್ಟು ತಡೆದಾಳು ಪಾಪ...
ಏನಾಯ್ತೋ? ನನ್ನಿಂದ ಏನಾದ್ರೂ ತಪ್ಪಾಯ್ತಾ?
ಇಲ್ಲಮಾ, it has nothing to do with you, dont worry.
ಫುಲ್‌ಸ್ಟಾಪಿಸಿ ಗಾಡಿ ಓಡಿಸೋ ಮೌನ ಬಂಗಾರ!
ಮನೆ ತಲುಪಿದ ಕೂಡಲೇ ಮೌನಕ್ಕೆ ಸಾಥ್ ಟಿವಿ
ನನ್ನ ಜೊತೆ ಸಾಕಾಯ್ತಾ? ದಿಂಬಿನೊಡನೆ ಪ್ರಶ್ನೆಗಳನ್ನು ಬಿಕ್ಕುತ್ತಿರೋವಾಗ್ಲೇ ಪಕ್ಕದಲ್ಲಿ ತೆಪ್ಪಗೆ ನಿದ್ದೆ ಹೊಡೆದುಬಿಟ್ಟಾಗ...
ಬಿಕ್ಕಿದ ಸಾಲುಗಳನ್ನು ಹೆಕ್ಕುವುದಕ್ಕೆ ಕೂತ ಡೈರಿಗೆ ಓವರ್‌ಟೈಮ್.
ಅತ್ತು ಅತ್ತು ಸುಸ್ತಾಗಿ ಅಂತೂ ಇಂತೂ ಹುಡುಗಿ ನಿದ್ದೆಗೆ ಜಾರಿದಾಗ ಡೈರಿಗೆ ಪಕ್ಕದ ಡೈರಿಯ ಜೊತೆ ಮಾತಿಗೆ ಸಮಯ.
ಏನಿತ್ತಲ್ಲಿ?
Today India lost the cricket match
against bangladesh.
DAMN
IT.

ಯಾವತ್ತೋ ಎಲ್ಲಿಂದಲೋ ಬಂದ forwarded mail. ಸಾಧಾರಣವಾಗಿ ನನಗೂ gender stereotype ಮೆಸೇಜುಗಳಿಗೂ ಅಷ್ಟಕಷ್ಟೆ. women drivers, wife bashing jokes...ಇಂಥವು. ಆದ್ರೆ ಇದನ್ನ ಓದಿದಾಗ ಮಾತ್ರ ಸುಳಿದದ್ದು ಕಿರುನಗೆ! ನೀನೂ ನಗ್ತೀಯಾ ಅಂತ ಗೊತ್ತಿತ್ತು. ಕಳಿಸಿದೆ. ಹೌದಲ್ಲ, ನಾ ಹೀಗೇನೇ! ಅಂತ ಇಬ್ರಿಗೂ ಅನ್ನಿಸಿಬಿಡ್ತಲ್ಲವಾ:)
ಮತ್ತೆ ನಿನ್ನ ಮೆಸೇಜು,
ಓದಿದೆ ಕಣೇ, ಈಗ್ಲಾದ್ರೂ ನಿನಗೆ ಅರ್ಥವಾಗಿರಬೇಕು ನಾನೆಷ್ಟು ಸಿಂಪಲ್, ಹೆಂಗಸರೆಷ್ಟು ಕಾಂಪ್ಲೆಕ್ಸ್(’ನೀನೆಷ್ಟು ಕಾಂಪ್ಲೆಕ್ಸ್’ ಅನ್ನೋಕೆ ಹೊರಟವನಿಗೆ ನನ್ನ ಚಾಮುಂಡಿ ಅವತಾರಗಳು ನೆನಪಾಗಿರ್ಬೇಕು ಅಲ್ವಾ!:) )ಅಂತಾ...

ನೀನಷ್ಟೇ ಯಾಕೆ, ೯೦% ಹುಡುಗ್ರೂ ಹಾಗೇನೇ, ೯೦% ಹುಡುಗಿಯರು ಹೀಗೇನೇ...ಅದಕ್ಕೇ ಅಲ್ವಾ ನಿಮಗೆ ನಾವು ನಮಗೆ ನೀವು ಬೇಕಾಗೋದು, ಪ್ರೀತಿ, ಕೋಪ, ನಗು, ಅಳು ಇವೆಲ್ಲಾ ಭೂಮಿ ಮೇಲೆ ಫೆವಿಕೋಲ್ ಹಾಕ್ಕೊಂಡು ಕೂತಿರೋದು?

ಹೌದು, ಅದಕ್ಕೇ ಬದುಕಲ್ಲಿ ಮಜಾ ಇರೋದು, ಹಾಗಂತ ತುಂಬಾ ಕಾಂಪ್ಲೆಕ್ಸ್ ಕೂಡ ಆಗಬಾರದು...

ನಿಜ, ತುಂಬಾ ಸಿಂಪಲ್, ತುಂಬಾ ಕಾಂಪ್ಲೆಕ್ಸ್ ಇವೆಲ್ಲಾ ಎಷ್ಟೆಷ್ಟು, ಎಲ್ಲಿ, ಯಾವಾಗ ಅಂತ ಯಾವುದೇ ಸಂಬಂಧದಲ್ಲಿ ನಿಧಾನಕ್ಕೆ ಅರ್ಥವಾಗುತ್ತಾ ಹೋಗುತ್ತೆ...ಮೊದಮೊದಲಿನ ಗೊಂದಲಗಳು ಸಹಜವಷ್ಟೇ ಅಲ್ಲ, ಈ ಬಗೆಯ ಅರ್ಥೈಸಿಕೊಳ್ಳುವಿಕೆಯ ಮೊದಲ ಹೆಜ್ಜೆಗಳೂ ಹೌದು. ಎರಡು ಕಡೆಯಿಂದ ಈ ಬಗೆಗೆ ಪ್ರಯತ್ನವಿದ್ದಾಗ balance ಹುಡುಕೋದು ಕಷ್ಟದ ಕೆಲಸವೇನಲ್ಲ...
ಹೂಂ, ಇದೆಲ್ಲ ವಟವಟಗಳು ನಿನಗೂ ಗೊತ್ತಿದ್ದೂ ನಾ ಬಡಬಡಾಯ್ಸುವಾಗ ಹೊಸತನ್ನೋ ಹಾಗೆ ನಸುನಗೆಯಲ್ಲಿ ಕೇಳ್ತೀಯಲ್ಲ, ಅದಕ್ಕೇ ನೀ ನನಗಷ್ಟು ಇಷ್ಟವಾಗೋದೇನೋ!

ಸರಿ, ಪಂಡಿತೆಯಂತೆ ಬೀಗೋದು ನಿಲ್ಲಿಸಿ ನಂ ಬಗ್ಗೆ ಸ್ವಲ್ಪ ಹೇಳ್ತೀನಿ ಕೇಳು.
ನಾವು ಹುಡುಗಿಯರು ಹೀಗೇ ಕಣೋ, ನಮ್ಮ ಕಾಂಪ್ಲೆಕ್ಸಿಟಿ ಪ್ರೀತಿಯ ಇನ್ನೊಂದು ಮುಖ ಅಷ್ಟೇ. ನಿಮ್ಮ ಮಾತುಗಳಿಗೆ ಬೀಳೋ ಅಷ್ಟೇ ಸುಲಭವಾಗ ನಿಮ್ಮ ಮೌನಗಳು ಚುಚ್ಚಿಬಿಡತ್ವೆ ನಮ್ಮನ್ನ... ಒಂದೇ ಕ್ಷಣದ ಹಿಂದೆ ನೀನಾಡಿದ ಪ್ರೀತಿಮಾತೂ ನೀ ನನ್ನ ಮರೆತು ಮುಳುಗೋ ಮೌನದಲ್ಲಿ ಒದ್ದಾಡಿಹೋಗುತ್ತೆ. silence kills, it just kills us!
ಯಾಕೆ ಗೊತ್ತಾ... ಒಂದು ಹುಡುಗಿಗೆ ನೀ ಇಷ್ಟ ಅನಿಸಿದ ಘಳಿಗೆಯಿಂದ 24X7, 365ದಿನಗಳೂ ನೀ ಅವಳ ಜೊತೆಯಿರ್ತೀಯ. ಎಷ್ಟೇ ಕೆಲಸ ಇರಲಿ, ಏನೇ ಯೋಚನೆ ಇರಲಿ...ಒಂದು ಕಿರುನಗೆಯಾಗಿ, ಹನಿ ಕಣ್ಣೀರಾಗಿ, ಒರಗೋ ಹೆಗಲಾಗಿ, ಆರ್ಭಟಗಳಿಗೆ ಕಿವಿಯಾಗಿ...ಅಲ್ಲಿ ನೀನಿದ್ದೇ ಇರ್ತೀಯ, ನಿನ್ನ ಲೋಕದಲ್ಲಿ ನೀ ಬಿಜಿಯಾಗಿರೋವಾಗಲೂ.
ಹಾಗೆ ನಮ್ಮೆಲ್ಲ ಬಿಜಿ ಬಿಜಿ ಲೋಕಗಳಲ್ಲೂ ನಿಮ್ಮನ್ನು ಭದ್ರವಾಗಿ ಕೂಡಿಸುವ ನಮಗೆ ನಮ್ಮನ್ನು ಮೀರಿದ ನಿಮ್ಮ ಲೋಕಗಳನ್ನ ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟ... ಆದ್ರೂ ಒಳ್ಳೇ ಹುಡುಗಿಯರು ನಾವು. ನೀವುಗಳು ಎರಡೇ ಎರಡು ಸೆಕೆಂಡ್ ತೊಗೊಂಡು, ಬಿಜಿ ಇದ್ದೀನಿ ಕಣೇ ಅಂತ ಒಂದು ಮಾತು ಹೇಳಿದರೂ ಮತ್ತೆ ಗುಲಾಬಿ ತೋಟದಂತೆ ಅರಳಿಬಿಡ್ತೀವಿ, ನಗುತ್ತಾ ಕಾದುಬಿಡ್ತೀವಿ...

ಇನ್ನೊಂದು ಮಾತು, ನಮ್ಮ ದುಪಟ್ಟಾಗಳಿಗೆ, ಸೀರೆಗಳಿಗೆ ಜಿಗ್‌ಜಾಗ್ ಮಾಡಿಸ್ತೀವಿ ಗೊತ್ತಾ? ಅಂಚು ಕಟ್ಟುವ ಕೆಲಸ. ಯಾಕೆ ಮಾಡ್ತೀವಿ ಗೊತ್ತಾ? ಹಾಗೆ ಕಟ್ಟದೇ ಇದ್ರೆ ಹರಿದುಹೋಗೋ ಚಾನ್ಸ್ ಜಾಸ್ತಿ. ಅದನ್ನ ತಪ್ಪಿಸೋಕೆ ಒಂದು ಅಂಚು. ಒಂದು definition. ಸಂಬಂಧಗಳಲ್ಲೂ ಅಷ್ಟೆ... ಅಂಚು ಕಟ್ಟಿದ, ಮಿತಿಗಳನ್ನ ಗುರ್ತಿಸಿದ ಸಂಬಂಧಗಳಲ್ಲಿ ಅರ್ಥವಾಗದೇ ಹರಿದುಹೋಗುವ ಸಾಧ್ಯತೆಗಳು ಆ ಮಟ್ಟಿಗೆ ಕಮ್ಮಿ. ಅರ್ಥವಾಗದಿದ್ದಾಗ ಆಗ್ಲಿಲ್ಲ ಕಣೋ ಅಂತ ಹೇಳಿ ಬಿಡಿಸಿ ಕೇಳೋ ಅಷ್ಟು ಹಕ್ಕಾದ್ರೂ ಇರುತ್ತಲ್ಲ ಅಲ್ಲಿ, ಅದೇ ಅದರ ಸೇಫ್ಟಿ ವಾಲ್ವ್.

ಆದ್ರೆ ಇಷ್ಟಕ್ಕೆ ನೀ ಏನು ಅಂತ ನಾ ತಿಳಿದುಕೊಳ್ಳೋಕೆ, ನಾ ಏನು ಅಂತ ನೀ ತಿಳಿದುಕೊಳ್ಳೋಕೆ ಒಂದು forward mail ಸಾಕು ಅಂತ ಆಗಿಬಿಟ್ರೆ, ಇದಕ್ಕೂ ನಾಕು ಟೆಕ್ಸ್ಟ್‌ಬುಕ್ಕು, ಎರಡು ಎಕ್ಸಾಮು ಇಟ್ಟು ಪಾಸು ಮಾಡಿಸಬಹುದಿತ್ತಲ್ವಾ? ಧ್ರುವಗಳ ಮಧ್ಯೆ ಬದುಕು ಅರಳಿರುವ ಪರಿಯಿಂದಲ್ಲವಾ ಭೂಮಿ ಸುಂದರ ಅನ್ನಿಸೋದು...

ನಿನಗೊಂದು ಕಿವಿ ಮಾತು ಅಂದಿದ್ದೆ ಅಲ್ವಾ, ಕೇಳು... ನಾ ನನ್ನ usual ವಟವಟ ಯಾವತ್ತಾದ್ರೂ ನಿಲ್ಲಿಸಿದ್ರೆ (ಯಾಆಅಆಆವತ್ತಾದ್ರೂ!) ಅದಕ್ಕೆ ಖಂಡಿತಾ ಕ್ರಿಕೆಟ್ ಕಾರಣವಾಗಿರೋಲ್ಲ. ನನ್ನೆಲ್ಲ ಮೌನಗಳ ಕಾರಣಗಳ ಜೊತೆ ನಿನಗೊಂದು ಲಿಂಕ್ ಪರ್ಮನೆಂಟಾಗಿ ಅಂಟಿಕೊಂಡಿರುತ್ತೆ - ’ನಾವು’ ಇರುವವರೆಗೆ...

Monday, September 29, 2008

’ಲವ್ ನೋಟ್‌’ಗಳು-೨

ನೀ ಅಡ್ಡಗೋಡೆಯ ದೀಪವಾದರೆ
ನಾ ಗಾಳಿಯಾಗಿಬಿಡ್ತೀನಿ;)

ಚಂದ್ರನಿಲ್ಲದ ರಾತ್ರಿ ಅನ್ನಿಸ್ತು
ಬೆಳದಿಂಗಳು ಬಿಸಿಲಾಯ್ತಾ ಅಂತ ಗುಮಾನಿ ಬಂತು
ಇನ್ನೊಂದು ಚಂದಿರ ಕಾಣಿಸೋ ಮುಂಚೆ
ನೀನೇ ಬಂದುಬಿಡು;))

(ಖಂಡಿತಾ ಇವತ್ತು ಬರೆದಿದ್ದಲ್ಲ :)) )

Saturday, August 23, 2008

ನಂ ಬೆಂಗ್ಳೂರ್ ಬಗ್ಗೆ ಹೇಮಾ ಬರೀತಿರೋ ಬ್ಲಾಗ್

ಅಪಾರ್ಟ್‌ಮೆಂಟಿನ ಬಾಗಿಲಿಗೆ ತೋರಣ ಕಟ್ಟಿ ರಂಗೋಲೆಯಿಟ್ಟು, ಹಬ್ಬಕ್ಕೆ ನಮ್ಮ ಅಮ್ಮನ ತಲೆಮಾರನ್ನೂ ಮೀರಿಸೋ ಹಾಗೆ ಒಬ್ಬಟ್ಟು ತಟ್ಟುತ್ತಾ ನಮ್ಮತನದಲ್ಲಿ ಸಂಭ್ರಮ ಕಂಡುಕೊಳ್ಳೋ ಈ ಹುಡುಗಿ ಕಾಲೇಜು ದಿನಗಳಿಂದ ಉಳಿದುಬಂದಿರೋ ಕೆಲವೇ ಆತ್ಮೀಯ ಗೆಳೆಯ-ಗೆಳತಿಯರಲ್ಲಿ ಒಬ್ಬಳು. ಹೊಸತರ ಬಗ್ಗೆ ಸದಾ ಕುತೂಹಲ, ಏಳುಬೀಳುಗಳನ್ನೆಲ್ಲ ದಾಟಿ ನಿಲ್ಲೋ ಸ್ಫೂರ್ತಿ, self-made ದಿಟ್ಟತನ, ಜೊತೆಗೊಂದಿಷ್ಟು ಕವಿಮನಸು, ಕನಸುಗಳು - ಹೇಮಾ ಇಷ್ಟವಾಗೋಕೆ ಇನ್ನೂ ಕಾರಣಗಳು ಬೇಕಾ?:)
ಕಾರ್ಪೊರೇಟ್ ಕಲರವಗಳ ಮಧ್ಯೆ ಕನ್ನಡದ ಕಂಪು ಹಂಚೋ ಕೆಲಸವನ್ನೂ ಮಾಡ್ತಿರೋ ಹೇಮಾ ಈಗ ಗುಬ್ಬಚ್ಚಿಗೂಡಿನ ಅತಿಥಿಗಳನ್ನ ಬೆಂಗಳೂರಿನ ಒಂದು ಮುದ್ದಾದ ದೇವಸ್ಥಾನಕ್ಕೆ ಕರೆದುಕೊಂಡುಹೋಗ್ತಿದ್ದಾಳೆ. ಮಾಲ್-ಪಬ್ಬುಗಳಲ್ಲಿ ಕಳೆದುಹೋಗ್ತಾನೋ ಅಥ್ವಾ ಬೆಂಗಳೂರಂದ್ರೆ ಅಷ್ಟೇ ಅಂತ ಶಪಿಸ್ತಾನೋ ಇರೋ ಜನರಿಗೆ ಬೆಂಗಳೂರಿನ ಇನ್ನೊಂದು ಮುಖದ ಪರಿಚಯ ಮಾಡಿಕೊಳ್ಳೋ ಒಳ್ಳೇ ಅವಕಾಶ ಇದು. ಈ ಹಿಂದೆ ಪಟದ ಹಬ್ಬದ ಬಗ್ಗೆನೂ ಗುಬ್ಬಚ್ಚಿ ಗೂಡಲ್ಲಿ ಚಿಲಿಪಿಲಿ ನಡೆದಿತ್ತು. ಮುಂದೆನೂ ಇನ್ನಷ್ಟು ಈ ಥರದ ಪರಿಚಯಗಳು ಗುಬ್ಬಚ್ಚಿ ಗೂಡಿನಲ್ಲಿ ಬರುತ್ವೆ ಅಂತ ಹೇಮಕ್ಕ ಪ್ರಾಮಿಸ್ ಮಾಡ್ತಿದಾಳೆ.
ಓದಿ ಎರಡು ಸಾಲು ಅನಿಸಿಕೆ ಹಂಚಿಕೊಂಡ್ರೆ ಖುಷಿಯಾಗ್ತಾಳೆ:)

Sunday, July 27, 2008

ಕನಸು ಕಸಿಯುವ ಕ್ಷಣಗಳು

ಊಟ ಮಾಡ್ತಾ ತೆಪ್ಪಗೆ ಸ್ಟಾರ್ ವಾಯ್ಸ್ ಆಫ್ ಇಂಡಿಯಾ ನೋಡೋದು ಬಿಟ್ಟು ಯಾರೋ ಕೆಟ್ಟದಾಗಿ ಹಾಡಿದ್ರು ಅಂತ ಚಾನಲ್ ಬದಲಿಸಿದ್ದು ತಪ್ಪಾ? ಗೊತ್ತಿಲ್ಲ! ಬೆಂಗಳೂರಲ್ಲಿ ಬಾಂಬ್ ಸರಣಿಯ ಸದ್ದಿನ್ನೂ ಅಡಗೋಕೆ ಮುಂಚೆ ಅಹಮದಾಬಾದಿನಲ್ಲಿ ಮಾರ್ದನಿಸಿದ್ದು ನೋಡ್ತಾ ಗಂಟಲಲ್ಲಿ ಅನ್ನ ಇಳೀಲಿಲ್ಲ...ಹೇಗೋ ತುರುಕಿ ನೀರುಕುಡಿದು ಎದ್ದಿದ್ದಾಯ್ತು... ೨೮ ಜೀವಗಳು...ಯಾರೋ ಏನೋ... ಅವುಗಳ ಸುತ್ತ ಕಟ್ಟಿಕೊಂಡಿದ್ದ ಬದುಕುಗಳಿನ್ನೆಷ್ಟೋ....
ಇನ್ನೂ ಉಸಿರುಕಟ್ತಿದೆ... ಒಳಗೆಲ್ಲ ಕಲಸಿದಂತೆ...ಕಣ್ಣೀರು ಕಟ್ಟೆ ಒಡೆದು ಹರಿಯೋಕೆ ಕಾಯ್ತಿದೆ...
ಹಿಂಸೆ ಹೇಗೆ ಸಾಧ್ಯವಾಗುತ್ತೆ ಅನ್ನೋ ಪ್ರಶ್ನೆ ಮತ್ತೆ ಕಾಡ್ತಿದೆ...

ತಿಂಗಳ ಹಿಂದೆ ಓದಿದ ಖಾಲಿದ್ ಹೊಸೇನಿಯ ’ಕೈಟ್ ರನ್ನರ್’, ’ಎ ಥೌಸೆಂಡ್ ಸ್ಪ್ಲೆಂಡಿಡ್ ಸನ್ಸ್’, ಅಫ್ಘಾನಿಸ್ತಾನದ ಹಿಂಸೆಯ ಸರಮಾಲೆಯ ಕಥೆಗಳಿಂದ ಮನಸ್ಸನ್ನ ಕಲಕಿಬಿಟ್ಟಿದ್ವು... ಅದೇ ಹೊತ್ತಿಗೆ ಅಲ್ಲಿನ indian embassyಯ ಮೇಲಿನ ಧಾಳಿ, ಅದರ ಹಿಂದೆ ಪತ್ರಿಕೆಗಳಲ್ಲಿ ಬಂದ ಅಫ್ಘಾನಿಸ್ತಾನದ ಕಣ್ಣೀರಿನ ಕಥೆಗಳೊಂದಿಷ್ಟು ಓದಿ ಅಯ್ಯೋ ಪಾಪ ಅನ್ನುವಾಗ ಈ ಪ್ರಶ್ನೆಗಳಿದ್ದರೂ, ಇಲ್ಲಿ ಬೆಚ್ಚಗೆ ಕೂತು ಅಯ್ಯೋ ಅನ್ನುವ ಸಾಧ್ಯತೆಯ ಬಗ್ಗೆ ಒಂದಿಷ್ಟು ನೆಮ್ಮದಿಯೂ ಸೇರಿತ್ತೇನೋ...ಈಗ ಪ್ರಶ್ನೆಗಳೆಲ್ಲ ಪುಸ್ತಕದಾಚೆ, ನನ್ನದೇ ನೆಲಕ್ಕೆ, ಮನೆಯ ಬಾಗಿಲಿಗೇ ಬಂದು ಕೂತಿವೆ!

ಬದುಕಿಗಾಗಿ ನಂಬಿಕೆಗಳು, ಆಸೆಗಳು, ಗುರಿಗಳು... ಬದುಕನ್ನೇ ನುಂಗಬಲ್ಲಷ್ಟು ಹೇಗೆ ಇವೆಲ್ಲ ಬಲಿಯುತ್ವೆ, ಎಲ್ಲಿ ಬಲಿಯುತ್ವೆ ಅರ್ಥಾನೇ ಆಗೋಲ್ಲ ನನಗೆ...

ಅಮಿತಾವ್ ಘೋಷರ ಶ್ಯಾಡೋ ಲೈನ್ಸ್‌ನಂತೆ ಗೆರೆ-ಗೆರೆಗಳೊಳಗೆ ಭಾಗವಾಗುತ್ತ ನಮ್ಮನ್ನೇ ತುಂಡು ತುಂಡಾಗಿಸಿಕೊಳ್ಳೋದರ ಬಗ್ಗೆ ಆತಂಕವೆನ್ನಿಸುತ್ತೆ... ಜೊತೆಗೇ ಆತಂಕದ ಕ್ಷಣಗಳಲ್ಲಿ ಸಿಕ್ಕ ಆಟೋ ಹತ್ತಿ ಲೈಸೆನ್ಸ್ ಪ್ಲೇಟಿನಲ್ಲಿರೋ ಹೆಸರು, ಊರು ನೋಡಿ ಗಾಬರಿಯಾಗೋ ಕ್ಷಣಗಳಲ್ಲಿ ನಮ್ಮ ಅರಿವಿಲ್ಲದೇ ದಟ್ಟವಾಗಿಸೋ ಗೆರೆಗಳ ಬಗ್ಗೆ ಇನ್ನಷ್ಟು ಆತಂಕ, ನಾಚಿಕೆ, ಕಸಿವಿಸಿ... ಮನುಷ್ಯತ್ವ ಅಷ್ಟು vulnerable ಆಗ್ತಿದೆಯಾ ಅನ್ನಿಸುತ್ತೆ... ಬೆಂಗ್ಳೂರಲ್ಲಿ ಬಾಂಬ್ ಸಿಡಿದು ಒಂದು ಘಂಟೆಯೊಳಗೆ ’ಇಬ್ರೇ ಅಂತೆ ಮ್ಯಾಮ್ ಸತ್ತಿದ್ದು’ ಅನ್ನುವ ೮ರ ಪುಟ್ಟಿಯ ಮಾತು ಕೇಳ್ತಾ ಕನಸುಗಳಿಗೆ ಕಸುವು ಕಮ್ಮಿಯಾಗಿಬಿಟ್ಟ ಭಾವ...

Saturday, July 26, 2008

ಮನದ ಮುಗಿಲಿನಲ್ಲಿ

ನೆನಪಿಗೊಂದು ಕಿರುನಗೆ
ಕನಸಿಗಿನ್ನೊಂದೆರಡು ಸುಳಿಮಿಂಚು...
ಹುಸಿಕೋಪದ ಹೊಗೆ, ಹೊಯ್ದಾಟ
ಗಲಿಬಿಲಿ ಹಕ್ಕಿಗೂಡು
ಇನ್ನೊಂದಷ್ಟು ತಲ್ಲಣ
ಕಣ್ಣಂಚಿಗೇ ಬಂದು ನಿಲ್ಲುವ ಕವಿತೆ...
ಇಷ್ಟೆಲ್ಲ ತುಂಬಿಕೊಳ್ಳಲು
ಮೌನದರೆಚಣ!

ಎಲ್ಲ ಕರಗಿ
ದಳದಳದಿ ನಳನಳಿಸಿ
ಅರಳಲು
ಒಂದು ಹೂನಗೆ
ತುಂತುರು ನೀರ ಹಾಡು

Sunday, June 22, 2008

’ಲವ್ ನೋಟ್’‌ಗಳು

೧೫X೪೦ ಸೈಟಿನ ಎರಡನೇ ಮಹಡಿಯಲ್ಲಿ
ಆಗೊಂದು ಈಗೊಂದು ಅರಳೋ ಜಾಜಿ ಹೂವು

ಹಳೆಯ ಕಡತಗಳಲ್ಲಿ ಕಳೆದುಹೋಗಬಿಡಬೇಡ
ಬೇಗ ಫೈಲ್ ಪಾಸ್ ಮಾಡು

ಪ್ಲಾನೆಟೇರಿಯಂ ಸರ್ಕಸ್
ಅಡ್ವೆಂಚರ್ ಪಾರ್ಕು ನೋಡಾಯ್ತು
ಮನೆಗೆ ಹೋಗೋದು ಯಾವತ್ತು?

ಕನಸು ಮಾರುವ ಚೆಲುವ ಹಾಡ ನಿಲ್ಲಿಸಬೇಡ*
ನಿಲ್ಲಿಸೋ ಪ್ಲ್ಯಾನ್ ಇದ್ರೆ ಹಾಡೋಕೇ ಹೋಗಬೇಡ!

ಹೂವಿಂದ ಹೂವಿಗೆ ಹಾರುವ ದುಂಬಿ*
ಹೊಸ ಇನ್ಸೆಕ್ಟಿಸೈಡ್ ತಂದಿಟ್ಟಿದೀನಿ

(ಇದನ್ನ ಕವಿತೆ ಅಂತಲೋ ಚುಟುಕ ಅಂತಲೋ ಖಂಡಿತಾ ಕರಿಯೋಕಾಗಲ್ಲ, ಗೊತ್ತು:)) ಸ್ವಲ್ಪ ತರಲೆ ಮೂಡ್ ಇದ್ದಾಗ ಬರೆದಿರೋ ಸಾಲುಗಳು ಅಷ್ಟೇ, ತುಂಬಾ ಚೆನ್ನಾಗಿವೆ ಅನ್ನೋ ಭ್ರಮೆ ನನಗೇ ಇಲ್ಲ... ಸೋ ನೀವು ಬಲವಂತ್ವಾಗಿ ’ಚೆನ್ನಾಗಿದೆ’ ಅನ್ಬೇಡಿ, ನಿಮಗೆಲ್ಲ ನನ್ನ ಮೇಲೆ ಪ್ರೀತಿ ಇದೆ ಅಂತ ಗೊತ್ತು!:) )
*ಮೂಲ ಕವಿಗಳ ಕ್ಷಮೆ ಯಾಚಿಸುತ್ತಾ...

Sunday, May 04, 2008

ನಮ್ಮ ಮೆಚ್ಚಿನ ಬ್ಲಾಗುಗಳಲ್ಲಿ ಹೊಸ ಪೋಸ್ಟುಗಳಿವೆಯಾ? : ಗೂಗಲ್ ರೀಡರ್ ಬಗ್ಗೆ ಪುಟ್ಟ ಪರಿಚಯ

ಶ್ರೀನಿಧಿಯ ಬ್ಲಾಗ್ ಅಪ್‌ಡೇಟ್ ಮೈಲ್‌ಗಳನ್ನ ನೋಡಿದಾಗ್ಲೆಲ್ಲ ಅಂದುಕೋತಿದ್ದೆ, ಈ ಬಗ್ಗೆ ಬರೀಬೇಕು ಅಂತ. ಇವತ್ತು 'ಮನಸು ಮಾತಾಡ್ತಿದೆ’ಯ ಶ್ರೀ ಕೂಡ ಇನ್ಮೇಲೆ ಬ್ಲಾಗ್ ಅಪ್ಡೇಟ್ ಮೈಲ್ ಕಳಿಸ್ತೀನಿ ಅಂತ ಮೈಲ್ ಮಾಡಿದಾಗ ಇವತ್ತು ಬರೆದೇ ಬಿಡ್ತೀನಿ ಅಂತ ಕೂತೆ. ಯಾವ್ದರ್ ಬಗ್ಗೆ ಅಂತಿದೀರಾ? ನಮ್ಮ ನೆಚ್ಚಿನ ಬ್ಲಾಗುಗಳು, ವೆಬ್‌ಸೈಟುಗಳಲ್ಲಿ ಹೊಸ ಪೋಸ್ಟ್‌ಗಳು ಬಂದ್ರೆ ಪತ್ತೆ ಇಡೋ ಸುಲಭವಾದ ವಿಧಾನ - ಗೂಗಲ್ ರೀಡರ್ ಬಗ್ಗೆ. ಹಲವು ಬ್ಲಾಗಿಗರು ಇದನ್ನ ಆಗ್ಲೇ ಉಪಯೋಗಿಸ್ತಿದಾರೆ, ಆದ್ರೆ ಇನ್ನೂ ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ ಅನ್ನಿಸಿದ್ದರಿಂದ ಈ ಪೋಸ್ಟ್. ತುಂಬಾ ಟೆಕ್ನಿಕಲ್ ಆಗಿ ಹೇಳೋದಕ್ಕೆ ನಂಗೆ ಅಷ್ಟು ವಿಷ್ಯ ಗೊತ್ತೂ ಇಲ್ಲ, ಎಲ್ಲರಿಗೂ ಅವಶ್ಯಕವೂ ಅಲ್ಲ ಅನ್ನಿಸತ್ತೆ. ಉಪಯೋಗದ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟು ಹೇಳ್ತೀನಿ, ಮಿಕ್ಕಿದ್ದಕ್ಕೆ ಇದ್ದೇ ಇದೆಯಲ್ಲ, ಗೂಗಲೋಪನಿಷದ್!(ಸುಪ್ತದೀಪ್ತಿಯವರ ಪದ!)

ಜಿಮೈಲ್ ಅಕೌಂಟ್ ಇದ್ದವರೆಲ್ಲಾ ಲಾಗ್ ಇನ್ ಆದಾಗ ಕಂಪ್ಯೂಟರ್ ಪರದೆಯಲ್ಲಿ ನಿಮ್ಮ ಎಡ ಮೇಲ್ತುದಿಯಲ್ಲಿ ಆರ್ಕುಟ್ ಇತ್ಯಾದಿ ಗೂಗಲ್‌ನ ಇತರ ಸೌಲಭ್ಯಗಳಿಗೆ ಜಿಮೈಲ್ ಅಕೌಂಟಿನಿಂದಲೇ ನೇರವಾಗಿ ಹೋಗುವ ಬಗ್ಗೆ ನೋಡಿರಬಹುದು. ಈ ಸಾಲಿನಲ್ಲೇ ರೀಡರ್ ಅಂತಲೂ ಒಂದು ಟ್ಯಾಬ್ ಇರುತ್ತೆ. ಅಲ್ಲಿ ಹೋಗಿ ನಿಮ್ಮ ರೀಡರ್ ಅಕೌಂಟ್ ಪ್ರಾರಂಭಿಸಬಹುದು. ರೀಡರ್ ಒಳಹೊಕ್ಕಮೇಳೆ ’ಆ‍ಯ್‌ಡ್ ಸಬ್ಸ್ಕ್ರಿಪ್ಶನ್’ ಅನ್ನುವ ಕಡೆ ನಿಮ್ಮ ನೆಚ್ಚಿನ ಬ್ಲಾಗ್/ ವೆಬ್ಸೈಟುಗಳ ಯು ಆರ್ ಎಲ್ ಒಂದೊಂದಾಗಿ ಸೇರಿಸುತ್ತಾ ಹೋಗಬಹುದು. ಹೀಗೆ ಸೇರಿಸಿದಮೇಲೆ ಆ ಸೈಟ್ ಅಥವಾ ಬ್ಲಾಗಿನಲ್ಲಿ ಹೊಸತೇನಾದರೂ ಪ್ರಕಟವಾದಾಗ ನಿಮ್ಮ ರೀಡರ್ ಅಕೌಂಟಿನ ಇನ್‌ಬಾಕ್ಸಿಗೆ ಆ ಬಗ್ಗೆ ಸೂಚನೆ ಬರುತ್ತೆ. ಹೊಸ ಪೋಸ್ಟುಗಳನ್ನ ಹುಡುಕಿ ಅಲೆಯೋದು, ಅಥ್ವಾ ನೋಡದೇ ಮಿಸ್ ಮಾಡೋದು ಇದ್ರಿಂದ ತಪ್ಪುತ್ತೆ. (ನನ್ನಂಥಾ ಸೋಂಬೇರಿ ಬ್ಲಾಗಿಗರ ತಿಂಗಳೆರಡು ತಿಂಗಳಿಗೆ ಬರೋ ಪೋಸ್ಟ್‌ಗಳ ನಿರೀಕ್ಷೆಯಲ್ಲಿ ನಮ್ಮ ಬ್ಲಾಗುಗಳಿಗೆ ವ್ಯರ್ಥ ತೀರ್ಥಯಾತ್ರೆ ಮಾಡೀ ಮಾಡೀ ಸೋತುಹೋಗೋದು ತಪ್ಪುತ್ತೆ!:P)

ಇದಕ್ಕೆ ಬ್ಲಾಗ್ ಅಥವಾ ಸೈಟಿನ ಮಾಲೀಕರು feed enable ಮಾಡಿರುವುದು ಅಗತ್ಯ. (ಬ್ಲಾಗರ್‌ನಲ್ಲಾದರೆ ಸೆಟಿಂಗ್ಸ್‌ನಲ್ಲಿ ಸೈಟ್‌ಫೀಡ್ ಅಂತಿರೋಕಡೆ ಕ್ಲಿಕ್ಕಿಸಿ ಇದನ್ನು enable ಮಾಡಬಹುದು.) ಸಾಮಾನ್ಯವಾಗಿ ಬ್ಲಾಗರ್, ವರ್ಡ್‌ಪ್ರೆಸ್‌‌ಗಳಲ್ಲಿರೋ ಬ್ಲಾಗುಗಳಲ್ಲಿ ಮುಂಚೆಯಿಂದಲೇ feed enable ಆಗಿರುತ್ತೆ ಅನ್ಸುತ್ತೆ. (ವರ್ಡ್‌ಪ್ರೆಸ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, ಆದ್ರೆ ಇಲ್ಲಿಯವರೆಗೆ ಯಾವ ವರ್ಡ್‌ಪ್ರೆಸ್ ಬ್ಲಾಗಿಗೆ ಸಬ್ಸ್ಕೈಬಿಸುವಾಗಲೂ ತೊಂದರೆಯಾಗಿಲ್ಲವಾದ್ದರಿಂದ ಹೀಗಿರಬಹುದು ಅಂತ ಹೇಳ್ತಿದ್ದೀನಷ್ಟೆ.) ಮುಕ್ಕಾಲು ಪಾಲು ವಬ್‌ಸೈಟುಗಳೂ ತಮ್ಮ ಹೊಸ ಪೋಸ್ಟುಗಳಿಗೆ ಹೀಗೆ feed enable ಮಾಡಿರುತ್ವೆ. ನಮ್ಮ ಕನ್ನಡದ ದಟ್ಸ್‌ಕನ್ನಡ, ಸಂಪದ - ಇವೆಲ್ಲ ಆ ಸಾಲಿಗೆ ಸೇರುವಂತಹವು. ಕೆಂಡಸಂಪಿಗೆಗೆ ಹೊಸ ಅವತಾರದಲ್ಲಿ feed enable ಮಾಡಿಲ್ಲ. ಪ್ರತೀಸಲ ಅಪ್‍ಡೇಟ್ ಆಗಿದೆಯೋ ಇಲ್ವೋ ನಾವೇ ಆ ಸೈಟಿಗೆ ಹೋಗಿ ಹುಡುಕಿ ನೋಡಿಕೊಳ್ಳಬೇಕು.

ರೀಡರ್ ಉಪ್ಯೋಗಿಸೋಕೆ ಷುರು ಮಾಡಿದ ಮೇಲೆ ನಮಗಿಷ್ಟವಾದ ಪೋಸ್ಟುಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳೋದೂ ಸುಲಭ. ಇದಕ್ಕೆ ಮೂರು ದಾರಿಗಳಿವೆ- ಒಂದು, ಯಾವುದೇ ಪೋಸ್ಟ್ ಓದಿದ ಕೂಡ್ಲೆ ರೀಡರ್‌ನಿಂದಲೇ ನಿಮ್ಮ ಗೆಳೆಯರಿಗೆ ಅದನ್ನು ಮೈಲ್ ಮಾಡಬಹುದು. ಎರಡು - ರೀಡರ್‌ನಲ್ಲಿ ಬರೋ ಹೊಸ ಪೋಸ್ಟ್‍ಗಳಲ್ಲಿ ನಿಮ್ಮ ಮೆಚ್ಚಿನವುಗಳನ್ನ ’ಶೇರ್’ ಮಾಡುವ ಆಯ್ಕೆ ಕ್ಲಿಕ್ಕಿಸಿದ್ರೆ ರೀಡರ್ ಅಕೌಂಟಿನಿಂದ ನಿಮ್ಗೆ ಸಿಗೋ ಪಬ್ಲಿಕ್ ಪೇಜಿನಲ್ಲಿ ಈ ಪೋಸ್ಟುಗಳು ಕಾಣಿಸಿಕೊಳ್ಳುತ್ವೆ. ಇದೊಂಥರಾ public list of your favourite reads ಅನ್ನಬಹುದು. ಇದಕ್ಕೇ ಪ್ರತ್ಯೇಕವಾದ ಯೂಆರೆಲ್ ಇದ್ದು, ನಿಮ್ಮ ಸ್ನೇಹಿತರು ಇಲ್ಲಿ ಬಂದು ನಿಮ್ಮ ಇತ್ತೀಚಿನ ಮೆಚ್ಚಿನ ಬರಹಗಳನ್ನು ಓದಬಹುದು. ನನ್ನ ರೀಡರ್ ಪೇಜ್ ಇಲ್ಲಿದೆ: http://www.google.com/reader/shared/user/16208109501848855281/state/com.google/broadcast

ಹಾಂ ಈ ಪುಟದಲ್ಲೇ get started with google reader ಅನ್ನೋ ಲಿಂಕನ್ನು ಕ್ಲಿಕ್ಕಿಸಿ ನಿಮ್ಮ ರೀಡರ್ ಯಾತ್ರೆ ಪ್ರಾರಂಭಿಸಬಹುದು:)
ಮೂರನೇದಾಗಿ, ಈ ಪಟ್ಟಿಯನ್ನು ನಿಮ್ಮ ಬ್ಲಾಗಿನಲ್ಲೂ ಹಾಕಿಕೊಳ್ಳಬಹುದು. ಹಲವು ಬ್ಲಾಗಿಗರು ಈ ಥರದ ಪಟ್ಟಿಗಳನ್ನ ತಮ್ಮ ಬ್ಲಾಗ್‌ಗಳಲ್ಲಿ ಹಾಕಿಕೊಂಡಿದ್ದಾರೆ. ನನ್ನ ಈ ಬ್ಲಾಗಿನಲ್ಲಿ ’Sree's shared items' ಅನ್ನುವ ಹೆಸರಲ್ಲಿ ಈ ಪಟ್ಟಿ ಇದೆ.

ಸರಿ, ಜಾಸ್ತಿ ತಲೆತಿನ್ನೋಕೆ ಹೋಗಲ್ಲ, ಉಪಯೋಗಿಸ್ತಾ ಹೋದಹಾಗೆ ಅದರ ವ್ಯಾಪ್ತಿ ನಿಮ್ಗೇ ಗೊತ್ತಾಗುತ್ತೆ. happy reading!:)

Monday, April 21, 2008

ನದಿ-ದಡ

ನದಿ ದಡ ದಡ ನದಿ

ನದಿ ನದಿ ನದಿ ದಡ

ದಡ ದಡ ನದಿ ದಡ

ಹಾರುತ್ತ ನಿಲ್ಲುತ್ತ

ನಿಲ್ಲುತ್ತ ಹಾರುತ್ತ

ಹರಿಯೋದು ನದಿಯೋ ದಡವೋ?

ನಿಲ್ಲೋ ನೆಲೆ ದಡವೋ ನದಿಯೋ?

ಉತ್ತರ ಮರೆತ ಪ್ರಶ್ನೆಗಳಲ್ಲಿ

ಗೆಲುವು ಕಳೆದಿದೆ

Sunday, March 16, 2008

ಕನ್ನಡ ಜಾಲಿಗರ ಮೀಟ್‌ - ಒಂದಷ್ಟು ಮೆಲುಕು

ಬ್ಲಾಗರ್ಸ್ ಮೀಟ್ ಬಗ್ಗೆ ಇ-ಮೈಲ್ ಗಳು, ಪೋಸ್ಟ್‌ಗಳು ಹಾರಾಡಿ ಇಲ್ಲೀವರೆಗೆ ಯುಆರೆಲ್ ಅಷ್ಟೆ ಆಗಿದ್ದವ್ರೆಲ್ಲರನ್ನ ಒಂದುಕಡೆ ಭೇಟಿಯಾಗೋ ಸಂಭ್ರಮ, excitementಗಳು ತುಳುಕಾಡಿ ಅಂತೂ ಇವತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌‍ನಲ್ಲಿ ಎಲ್ಲ ಸೇರುವಂತಾಯ್ತು. ನಾಲ್ಕಕ್ಕೆ ಕಾರ್ಯಕ್ರಮ ಅಂತ ಕಾಲು ಘಂಟೆ ಮುಂಚೆನೇ ಹೋಗಿ ಸೇರಿದವಳಿಗೆ ಇವರ್ ಬಿಟ್ಟ್ ಅವರ್ ಬಿಟ್ಟ್ ಇವರ್ ಬಿಟ್ಟು ಅವರ್ ಬಿಟ್ಟ್ ಇವರ್ಯಾರು ಅಂತ ತೆರೆದ ಕಣ್ಣಲ್ಲೇ ಗೆಸ್ಸಿಂಗ್ ಗೇಮ್‌ ಷುರು ಆಗಿತ್ತು. ಕಡೇ ಪಕ್ಷ ಈ ಮೀಟಿಗೆ ಆಹ್ವಾನ ಕಳಿಸಿದ್ದವರನ್ನಾದ್ರೂ ಸರಿಯಾಗಿ ಗುರುತಿಸಬೇಕು ಅಂತ ಆರ್ಕುಟ್ ಆಲ್ಬಂಗಳಿಗೆ ಭೇಟಿ ಕೊಟ್ಟಿದ್ರೂ ಕೊನೆಗೆ ಸಹಾಯಕ್ಕೆ ಬಂದದ್ದು ಯುಆರ್‌ಎಲ್‌ಗಳೇ!:)) ಯಾರಿರಬಹುದು ಅಂತ ಗೆಸ್ ಮಾಡ್ತಾ, ಪರಿಚಯ ಮಾಡಿಕೊಳ್ತಾ, ಮಾಡಿಸ್ತಾ...ನಾಕೂವರೆ ಸುಮಾರಿಗೆ ಕಾರ್ಯಕ್ರಮ ಷುರುವಾಯ್ತು. ಕಾರ್ಯಕ್ರಮದ ವರದಿ ಇಲ್ಲಿ ಮಾಡೋ ಸಾಹಸಕ್ಕೆ ಹೋಗಲ್ಲ, ಅದು ನಿಮಗೆ ಬೇರೆ ಕಡೆಯೂ ಸಿಗುತ್ತೆ ಅನ್ನೋ ನಂಬಿಕೆಯೂ ಇರೋದ್ರಿಂದ!:) ಕಾರ್ಯಕ್ರಮಕ್ಕೆ ನನ್ನ ಪ್ರತಿಕ್ರಿಯೆಗಳು, ನನ್ನಲ್ಲಿ ಎದ್ದ ಕೆಲವು ಪ್ರಶ್ನೆಗಳು, ಒಂದಿಷ್ಟು ಖುಷಿ - ಇವುಗಳು ಈಗ ಇಲ್ಲಿ ನಿಮಗಾಗಿ.

ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್‌ಹೆಡ್ ಟ್ರಾನ್ಸ್‌ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್‌ಕನ್ನಡದ ಶ್ಯಾಮಸುಂದರ್‍ಅವರು ಹೇಳಿದ್ರು. ಈಚೆಗೆ ಹುಲುಸಾಗಿ ಬೆಳೀತಿರೋ ಬ್ಲಾಗ್‌ಗಳನ್ನ ಓದ್ತಾ ಈ ಮಾತು ನನ್ನ ಮನಸ್ಸಿಗೂ ಬಂದಿತ್ತು. ಅದಕ್ಕೇ ಹೀಗೇಸುಮ್ಮ್ನೆಇಲ್ಲಿ ಬರೆಯೋದರ ಜೊತೆಗೆ ಸಂಗೀತಕ್ಕಾಗಿ sree-raaga.blogspot.com ಷುರು ಮಾಡಿದ್ದೆ. ಆದ್ರೆ ಹಾಗಂತ ಭಾವಲಹರಿಗಳಿಗೆ ಬೆಲೆಯಿಲ್ಲ ಅಂತಲ್ಲ. ಕಂಪ್ಯೂಟರ್ ಜನಾಂಗಕ್ಕೆ ಕನ್ನಡ ಹತ್ತಿರವಾಗಿಸೋದ್ರಲ್ಲಿ, ನಾವೂ ಕನ್ನಡ ಓದ್ತೀವಿ-ಬರೀತೀವಿ ಅನ್ನೋ ಅಭಿಮಾನ ಹುಟ್ಟಿಸೋದ್ರಲ್ಲಿ ಭಾವಲಹರಿಗಳ ಪಾತ್ರ ಅದನ್ನ ದಾಟಬೇಕಾದ ಅವಶ್ಯಕತೆಯಷ್ಟೇ ದೊಡ್ದದು ಅನ್ನಿಸುತ್ತೆ.

ಇದೇ ವಿಷ್ಯಕ್ಕೆ ಸಂಬಂಧ ಪಟ್ಟಹಾಗೆ ಶ್ಯಾಮ್‌ಸುಂದರ್ ಅವ್ರು ಹೇಳಿದ್ದ್ ಇನ್ನೊಂದು ಮಾತು - ಬ್ಲಾಗರ್ಸ್ ಜವಾಬ್ದಾರಿಯ ಬಗ್ಗೆ. ನನಗೇನ್ ಬೇಕೋ ಬರೀತೀನಿ, ನಿಂಗೆ ಇಷ್ಟ ಇದ್ದ್ರೆ ಓದು, ಕಷ್ಟವಾದ್ರೆ ಬಿಡು ಅನ್ನೋ ಧೋರಣೆ ತಪ್ಪು ಅಂದ್ರು. ಅದು ಸರೀನೇ... ಆದ್ರೆ ಬ್ಲಾಗ್ ಷುರುಮಾಡಿದ್ ಹೊಸದ್ರಲ್ಲಿ ನನಗೂ ಆ ಧೋರಣೆ ಇದ್ದದ್ದು ಸುಳ್ಳಲ್ಲ. ಆ ಬಗ್ಗೆ ತಿಳಿಯದೇ ಕನ್ನಡಸಾಹಿತ್ಯ.ಕಾಂನ ಶೇಖರ್‌ಪೂರ್ಣ‌ಅವರ ಜೊತೆ ವಾದಕ್ಕೂ ಇಳಿದಿದ್ದೆ! ಈಗ ಭಾರೀ ಜವಾಬ್ದಾರಿಯುತವಾಗಿ ಬರೀತೀನಿ ಅಂತಲ್ಲ. ಆದ್ರೆ ಕಡೇಪಕ್ಷ ಹಾಗೆ ಬರೀತಿಲ್ಲ ಅನ್ನೋ ಅರಿವು, ಅದರ ಬಗ್ಗೆ ಸ್ವಲ್ಪ guilt, ಚೆನ್ನಾಗಿ, ಅರ್ಥಪೂರ್ಣವಾಗಿ ಏನಾದ್ರೂ ಬರೀಬೇಕನ್ನೋ ಹಂಬಲ ಇದೆ ಅನ್ನಬಹುದು. ಇಷ್ಟು ಅನ್ನಿಸೋಕೆ ತಲೆಯಮೇಲೆ ಯಾವ ಬೋಧಿವೃಕ್ಷವೂ ಬೆಳೀಲಿಲ್ಲ, ೨ ವರ್ಷ ಹೀಗೇಸುಮ್ಮ್ನೆ ಕುಟ್ಟಿ ಉಳಿದ ಬ್ಲಾಗಿಗರ ಜೊತೆ interact ಮಾಡ್ತಾ, ಅವರು ಬರೆದದ್ದು ಓದ್ತಾ ಬಂದ ಅನುಭವ ಸಾಕಾಯ್ತು. ಒಂದಷ್ಟು introspection ಮಾಡಿಕೊಂಡ ಎಲ್ಲ ಬ್ಲಾಗಿಗರೂ ಹೀಗೆ ಅನುಭವದ ಘಟ್ಟಗಳನ್ನ ಹಾದುಹೋಗ್ತಾರೆ, ಹೀಗೇ ಬರೀತಾ ಹೋದ ಹಾಗೆ introspection ನಮ್ಮೊಳಗಿಂದ್ಲೇ ಅವಶ್ಯಕತೆಯಾಗಿ ಬರುತ್ತೆ ಅನ್ನಿಸುತ್ತೆ. ಯಾರಾದ್ರೂ ಸ್ವಲ್ಪದೊಡ್ಡವರು-ಅನುಭವಿಗಳು ನಮ್ಮ ಬರಹಗಳನ್ನ ಓದಿ, ನಮ್ಮ ಭಂಡಧೈರ್ಯಗಳಿಗೆ ನಾಕು ಪ್ರಶ್ನೆಗಳನ್ನಿಟ್ಟರೆ ಈ introspection ಇನ್ನಷ್ಟು ಸುಲಭವಾಗುತ್ತೆ. ಜೊತೆಗೆ ಸ್ವಲ್ಪ guidence ಕೂಡ ಸಿಕ್ಕರೆ ಗಟ್ಟಿಯೂ ಆಗ್ತೀವೆನೋ, ಒಳ್ಳೇ ಬರಹಗಾರರಲ್ಲದಿದ್ರೂ ಒಳ್ಳೆಯ ಓದುಗರಾಗಿಯಾದ್ರೂ...

ಅದೇನೇ ಇದ್ದರೂ ಯಾವ ಪಬ್ಲಿಶರ್ ಹಂಗಿಲ್ಲದೇ ನಾಕುಜನ ಓದುಗರನ್ನ ಗಿಟ್ಟಿಸಿಕೊಳ್ಳೋದರಿಂದ ನಮ್ಮಲ್ಲಿ ಒಂದುರೀತಿಯಲ್ಲಿ natural bratತನ ಇದ್ದೇ ಇರುತ್ತೆ, ಅದರಿಂದ ಬ್ಲಾಗ್ ಬರಹಗಳಿಗೇ ಒಂದು ವಿಶಿಷ್ಟ ಫ್ಲೇವರ್ ಕೂಡ ಇರುತ್ತೆ. ಅದು ತೀರಾ ಬೇಜವಾಬ್ದಾರಿತನವಾಗದೇ ಹೋಗೋದಕ್ಕೆ ಸ್ವಲ್ಪ ಎಚ್ಚರವಹಿಸಬೇಕಷ್ಟೆ. ಸಂವಾದ, ಬೇರೆ ಬರಹಗಳ ಓದು ಇದಕ್ಕೆ ಸಹಾಯವಾಗುತ್ತೆ ಅಂತ ನನಗನ್ನಿಸೋದು... ನಮ್ಮ-ನಮ್ಮ ನಡುವಿನ ಮಾತುಗಳು ಬೆಳೀಬೇಕು ಅನ್ನೋದಕ್ಕೆ, ಇವತ್ತಿನ ಮೀಟ್‌ನಂಥದ್ದರ ಅವಶ್ಯಕತೆಗೆ ಇನ್ನೊಂದು ಕಾರಣ...

ಬ್ಲಾಗಿಂಗ್ ಅನುಭವದ ಬಗ್ಗೆ ಮಾತಾಡಿದವ್ರಿಗೆ ಇನ್ನೊಂದೆರಡು ನಿಮಿಷ ಪ್ರಿಪರೇಷನ್ ಸಮಯ ಸಿಕ್ಕಿದ್ರೆ ಸ್ವಲ್ಪ ಫೋಕಸ್ಡ್ ಆಗಿ ಮಾತಾಡೋಕೆ ಸಾಧ್ಯವಾಗ್ತಿತ್ತೇನೋ ಅನ್ನಿಸ್ತು. ’ಚೆನ್ನಾಗಿದೆ’ ಅನ್ನೋದರಿಂದ ಮುಂದೆ ಹೋಗಿ ವಿಮರ್ಶೆಯೂ ಬರಬೇಕು ಅನ್ನೋ ಸುಧನ್ವ ದೇರಾಜೆಯವರ ಮಾತು ನಮ್ಮ ನಮ್ಮಲ್ಲಿ ಇನ್ನಷ್ಟು ಮಾತು-ಕತೆಯ ಅವಶ್ಯಕತೆಯನ್ನ ತೋರಿಸ್ತು ಅನ್ನಿಸುತ್ತೆ. ಈ ರೀತಿಯ ಹೀಗೇ ಸುಮ್ಮನೆ ಚೆನ್ನಾಗಿದೆ ಅನ್ನೋ ಕಾಮೆಂಟುಗಳಿಗೂ ಅವುಗಳದ್ದೇ ಬೆಲೆ ಇದೆ, ಬರೆಯುವವರ ಹುಮ್ಮಸ್ಸಿಗೆ ನೀರೆರೆಯೋದರಲ್ಲಿ. ಆದರೆ ಪ್ರಕಟಿತ ಸಾಹಿತ್ಯಕ್ಕೆ ಸಿಗುವಷ್ಟು ವಿಮರ್ಶೆಯ ಮರ್ಯಾದೆ ಸಿಗದಿರೋದಕ್ಕೆ ಇದು ಬಹುಮಟ್ಟಿಗೆ ’ಹೀಗೆ ಸುಮ್ಮನೆ’ ಬರಿಯೋ-ಓದೋ ಮೀಡಿಯಮ್ ಆಗಿರೋದು ಕಾರಣವೇನೋ. ರೀಡಿಂಗ್ ಕ್ಲಬ್ ಆಗಿಯೋ ಮೈಲ್ ಗ್ರೂಪ್ ಆಗಿಯೋ ಬರೆದದ್ದನ್ನು ಚರ್ಚಿಸಲು ಒಂದು ಮಾಧ್ಯಮ ಹುಡುಕಿಕೊಳ್ಳಬೇಕಾದ ಅಗತ್ಯ ಇದೆ ಅನ್ನಿಸುತ್ತೆ, ಕಾಮೆಂಟ್‌ಗಳ ಮೂಲಕವೇ ಇದು ಸಾಧ್ಯವಾಗೋದು ಅಷ್ಟು ಸುಲಭವಲ್ಲವೇನೋ ಅನ್ನಿಸುತ್ತೆ. ಯಾಕಂದ್ರೆ ಬ್ಲಾಗ್ ಓದೋದು, ಕಾಮೆಂಟಿಸೋದು ಎಲ್ಲಾ ಕ್ಯಾಶುವಲ್ಲಾಗಿ, ಯಾವಾಗ್ಲೋ ಸಿಕ್ಕ ಎರಡು ನಿಮಿಷದ ಬ್ರೇಕ್‌ನಲ್ಲೂ ನಡೆದುಹೋಗ್ತಿರುತ್ತೆ. ಫೋಕಸ್ಡ್ ಪ್ರತಿಕ್ರಿಯೆ-ಚರ್ಚೆಗಳಿಗೆ ಅದಕ್ಕೇ ಆದ ಒಂದು ಸ್ಥಾನ ಕಲ್ಪಿಸದೇ ಇದು ಸಾಧ್ಯವಾಗಲ್ಲ. ಕನ್ನಡ ಬ್ಲಾಗ್‌ಗಳ ಸಂಖ್ಯೆಯ ಜೊತೆ ವ್ಯಾಪ್ತಿಯೂ ಬೆಳೀತಿರೋ ಕಾಲದಲ್ಲಿ ಅವುಗಳನ್ನ ಪೋಷಿಸೋದಕ್ಕೆ ಈ ರೀತಿಯ ಸಪೋರ್ಟ್ ಸಿಸ್ಟಂ ಹುಟ್ಟೋ ಅವಶ್ಯಕತೆ ಇದೆ ಅನ್ನಿಸುತ್ತೆ. ಇವತ್ತಿನ ಮೀಟ್ ಈ ಬಗೆಯ ಸಂವಾದಗಳಿಗೆ ಒಂದು ಒಳ್ಳೆಯ ಪ್ರಾರಂಭ ಅನ್ನಿಸುತ್ತೆ.

ಚಹಾ ವಿರಾಮದಲ್ಲಿ ಜಯಾ ಹೇಳಿದಂತೆ ಸ್ವಲ್ಪ preachy ಅನ್ನಿಸಿದ್ರೂ ಚಿಂತನೆಗೆ ಹಚ್ಚೋ ಹಲವು ವಿಷ್ಯಗಳು ಕಾರ್ಯಕ್ರಮದಲ್ಲಿದ್ದ್ವು ಅನ್ನೋದು ನಿಜ. ಮೊದಲ ಪ್ರಯತ್ನವಾಗಿ ಕಾರ್ಯಕ್ರಮ ತುಂಬಾ ಯಶಸ್ವಿ ಅನ್ನಿಸ್ತು. ನಮ್ಮ ನಡುವೆ ಇನ್ನೊಂದಿಷ್ಟು interactionಗೆ ಅವಕಾಶ, ಕಂಟೆಂಟ್ ಬಗ್ಗೆ ಇನ್ನೊಂದಿಷ್ಟು ಗಮನ ಇದ್ದಿದ್ದರೆ... ಇರುತ್ತೆ, ಮುಂದಿನ ಪ್ರಯತ್ನದಲ್ಲಿ, ಅನ್ನಿಸುತ್ತೆ.

ಒಟ್ಟ್ನಲ್ಲಿ ಹಲವು ದಿನಗಳಿಂದ ಒಬ್ಬರದೊಬ್ಬರು ಬ್ಲಾಗ್ ಓದ್ತಾ, ಕಮೆಂಟಿಸ್ತಾ ಇದ್ದ ಹಲವು ಗೆಳೆಯರನ್ನ ಮೊದಲಬಾರಿ ಮುಖತಃ ಭೇಟಿ ಮಾಡಿದ್ದು ತುಂಬಾ ಖುಷಿಯಾಯ್ತು! ಶ್ರೀ, ಸುರೇಖಾ(ಮನಸ್ವಿನಿ), ಸಿಂಧು, ಶ್ರೀನಿಧಿ, ಸುಶ್ರುತ, ರಾಧಾಕೃಷ್ಣ, ಅರವಿಂದ್ ನಾವಡ, ಶಿವಕುಮಾರ್, ಗುರುರಾಜ್... ಅಲ್ಲದೇ ಓದಿ ಚೆನ್ನಾಗಿ ಬರೀತಾರೆ ಅನ್ನಿಸಿದ್ದ ಹಲವು ಬ್ಲಾಗಿಗರನ್ನ ನೋಡಿದ್ದು, ಮಾತಾಡಿಸಿದ್ದು, ಹೊಸ ಪರಿಚಯಗಳಾಗಿದ್ದು... I guess everyone shares the feeling of wanting to take this forward. ಪ್ರಣತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು! ಮಾತಾಡೋಕೆ ಟೈಮ್ ಸಾಲಲಿಲ್ಲ, ಮುಂದಿನ ಭೇಟಿ ಬೇಗ ಆಗ್ಬೇಕು! ಈ ಸಲ ಬರದೇ ಮಿಸ್ಆದ್ ಬ್ಲಾಗಿಗರನ್ನೂ ಮುಂದಿನಸಲ ಮೀಟ್ ಮಾಡೋ ಹಾಗಾಗಬೇಕು!

ಅಂದಹಾಗೆ ಯಾವ ಮದುವೆಮನೆ ಹುಡುಗೀರ್‍‌ಗೂ ಹೆಚ್ಚಾಗಿ ಸಂಭ್ರಮ-ಸಡಗರಗಳಿಂದ ಓಡಾಡ್ತಿದ್ದ ನಮ್ಮ ಶ್ರೀನಿಧಿ-ಸುಶ್ರುತ ಹುಡುಗರ್ ಗುಂಪನ್ನ ನೋಡಿ ಭಾಳಾ ಖುಷಿಯಾಯ್ತು!

ತುಂಬಾ ಕೊರೆದುಬಿಟ್ಟೆ! ಏನ್ ಮಾಡೋದು, ಅಷ್ಟು ಜನ ಕುಟ್ಟಿಗರನ್ನ ಒಟ್ಟಿಗೇ ನೋಡಿದ್ದ್ ಎಫೆಕ್ಟು!:P ಸರಿ ಇನ್ನು ಮಿಕ್ಕ ವಿವರಗಳಿಗೆ ಬೇರೆ ಬ್ಲಾಗ್‌ಗಳನ್ನ ನೋಡಿ:) ಮತ್ತೆ ನನ್ನ ಕ್ಯಾಮರಾ ಚಾರ್ಜ್ ಮಾಡೊದ್ ಮರೆತಿದ್ರಿಂದ ಫೋಟೋಗಳಿಗೆ ಕಾಯಬೇಕು...ನೀವ್ ಯಾರಾದ್ರೂ ಕ್ಲಿಕ್ಕಿಸಿದ್ರೆ ಪ್ಲೀಸ್ ಕಳ್ಸಿ!:)

Thursday, February 28, 2008

ಮತ್ತೆ ಸುತ್ತುತ್ತಾ

ಭರವಸೆಗಳಿಗೆ ರಜಾ ಕೊಟ್ಟುಬಿಡಬೇಕು
ಕನಸುಗಳನ್ನ ಗುಡಿಸಿ ಬಿಸಾಕಿಬಿಡಬೇಕು
ತಣ್ಣಗಿದ್ದುಬಿಡಬೇಕು
ಬೇಕು ಬೇಕು ಬೇಕು ಬೇಕು
ಫೀನಿಕ್ಸುಗಳು ಮತ್ತೆ ಎದ್ದು ಕೂತವು
ಭಸ್ಮಾಸುರನ ಬೂದಿಯಿಂದೆದ್ದ ಮೋಹಿನಿಯರು
ಕಣ್ಣಲ್ಲಿ ನಾಕು
ಕನಸಲ್ಲಿ ಎಂಟು
ಒಂದು ಬೂದಿಗೆ ಎರಡು ಹಕ್ಕಿ ಫ್ರೀ -
ಕನಸೀಗ ರಕ್ತಬೀಜಾಸುರ.
ಯಾರಪ್ಪನ ಮನೇ ಗಂಟು,
ಕನಸಿಗೇನು ಕಾಸೇ?!
ಮತ್ತೆ ಸುತ್ತುತ್ತಾ
ಸರಿ, ಬನ್ನಿ, ಕುಕ್ಕಿ ಎಂದೆ
ಮತ್ತೆ ಸುಡುತ್ತಾ

Wednesday, February 20, 2008

ದೇಶಕಾಲದ ನಂಟು

ಕೆಲಸಕ್ಕೆ ಸೇರಿದ್ ಹೊಸದರಲ್ಲಿ ಊರಿಗೆಲ್ಲ ಒಬ್ಬಳೇ ಪದ್ಮಾವತಿಯಂತೆ ಅಲ್ಲಿದ್ದ ಆಲ್‍ಮೋಸ್ಟ್ ಏಕೈಕ(ಆಗ) ಕನ್ನಡ ಓದುಗಳಾಗಿ ಮೆರೀತಿದ್ದಾಗ, ಕನ್ನಡದ little magazineಗಳ ಬಗ್ಗೆ ಮಾಹಿತಿ ಹುಡುಕ್ತಿದ್ದಾಗಲೆಲ್ಲ ಪದೇ ಪದೇ ಎದುರಾದ ’ನೀನ್ ದೇಶಕಾಲ ಓದಲ್ಲ್ವಾ/ನೋಡಿಲ್ಲ್ವಾ’ ಪ್ರಶ್ನೆಗಳಿಂದ ಓಹ್ ಇದನ್ನ್ ಒಂದ್ಸಲ ನೋಡ್ಬೇಕು ಅನ್ನಿಸಿದ್ದ್ರೂ ಅದು ಅಲ್ಲಿಗೇ ನಿಂತಿತ್ತು.

ಈಚೆಗೆ ಬರಿಯೋದು ಕಮ್ಮಿ, ಓದೋದು ಜಾಸ್ತಿ ಮಾಡ್ಬೇಕು ಅನ್ನಿಸಿ, ಕುವೆಂಪು-ಕಾರಂತರಾಚೆ ಕನ್ನಡ ಓದಿದ್ದು ಸಾಲ‍ದು ಅಂತ ಜ್ಞಾನೋದಯ ಆಗಿ, ಅಲ್ಲಿ ಇಲ್ಲಿ ಪುಸ್ತಕ ಹುಡುಕ್ತಾ, ಕೈಗೆ ಸಿಕ್ಕಿದ್ದ್ ಓದುತ್ತಾ ಇಂಟರ್ನೆಟ್ ಅನ್ನೋ ಬಲೆಯಲ್ಲಿ ಕನ್ನಡ ಜಾಲಾಡ್ತಾ ಸಿಕ್ಕಪಕ್ಕ ಬ್ಲಾಗುಗಳು, ವೆಬ್‍ಸೈಟ್‍ಗಳನ್ನ ಹಿಗ್ಗಾಮುಗ್ಗಾ ಓದ್ತಾ ಕಾಳು-ಜೊಳ್ಳುಗಳ ಮಧ್ಯೆ ಮುಗ್ಗರಿಸ್ತಿದ್ದ ಹೊತ್ತಿಗೆ ’ದೇಶಕಾಲ’ಕ್ಕೆ ಮೂರು ತುಂಬಿದ ಸಂಭ್ರಮ ಎಲ್ಲಾ ಕಡೆ ಕೇಳಿಬಂದದ್ದು ಯಾವ ಸಚಿನ್‍ನೂ ಮೀರಿಸೋ ಟೈಮಿಂಗು ಅಂತ ನನ್ನ್ ಅಭಿಪ್ರಾಯ. ನೀನಾಸಂ ಶಿಬಿರಕ್ಕೆ ಹೋಗೋ ಅವಕಾಶವೂ ಈ ಸಲ ಬಂದು, ಅಲ್ಲಿ ಮತ್ತೆ ದೇಶಕಾಲದ ವಲಯದಲ್ಲಿ ಮುಳುಗೆದ್ದು ಬೆಂಗ್ಳೂರಿಗೆ ಬಂದಿಳಿದ್ರೆ ಮತ್ತೆ ನಮ್ಮ ಐ ಎಫ್ ಏ ನ್ಯೂಸ್‍ಲೆಟರು, ಸಂಪದ, ಎಲ್ಲಾ ಸೇರಿ ದೇಶಕಾಲ-ಜಪ ಮುಂದುವರೆಸಿಬಿಟ್ಟಿದ್ವು! ಇನ್ನು ಸಬ್‍ಸ್ಕ್ರೈಬಿಸದೇ ದಾರಿಯಿಲ್ಲ ಅಂತ ಚೆಕ್ ಬರೆದು, ನನ್ನ ಎಂದಿನ ಸೋಮಾರಿತನದ ದೆಸೆಯಿಂದ ಒಂದು ವಾರ ಬಿಟ್ಟು ಪೋಸ್ಟಿಸಿ ಇನ್ನೂ ಸುಧಾರಿಸ್ಕೋತಿದ್ದೆ. ಎರಡನೇ ದಿನಕ್ಕೇ ಕೊರಿಯರ್ ಬಂದುಬಿಡೋದಾ?! ನೀನಾಸಂನಲ್ಲಿ ವಿವೇಕ್ ಶಾನಭಾಗರನ್ನ ದೂರದಿಂದ ನೋಡಿ ಈ ಮನುಷ್ಯ ಎಷ್ಟು ತಣ್ಣಗಿರ್ತಾರಪ್ಪ ಅಂತ ಅಚ್ಚರಿಪಟ್ಟಿದ್ದೆ. ಅವರ ಸದ್ದುಗದ್ದಲವಿಲ್ಲದ ಎಫಿಶಿಯೆನ್ಸಿಯ ಬಗ್ಗೆ ಈಗಾಗ್ಲೇ ಕೇಳಿದ್ರೂ ಇದನ್ನ ಅರಗಿಸಿಕೊಳ್ಳೋಕೆ ಸ್ವಲ್ಪ ಸಮಯವೇ ಬೇಕಾಯ್ತು!

ಸಾಹಿತ್ಯದ ವಿದ್ಯಾರ್ಥಿಯಾಗಿದ್ದೂ ಕನ್ನಡಸಾಹಿತ್ಯವನ್ನ ಫಾರ್ಮಲ್ ಆಗಿ ಓದದ ಕಾರಣ ಮೊದಲಸಲ ಕನ್ನಡಸಾಹಿತ್ಯಕ್ಕೆ ಮೀಸಲಿಟ್ಟ ಜರ್ನಲ್ ಕೈಯ್ಯಲ್ಲಿ ಹಿಡಿದಾಗ ಹುಟ್ಟಿದ ಎಂತೋ ಏನೋ, ಕನ್ನಡವೇ ಪರಕೀಯವೆನಿಸಿ ಅತಂತ್ರದಲ್ಲಿ ಮುಳುಗಿಬಿಡ್ತೀನೇನೋ ಅನ್ನೋ ಅನುಮಾನಗಳನ್ನೂ, ಓದಿ ನೋಡಬೇಕು ಅನ್ನೋ ಹಂಬಲವನ್ನೂ ಪಕ್ಕದಲ್ಲಿ ಕೂಡಿಸಿಕೊಂಡು ಪುಟ ತೆರೆದೇ ಬಿಟ್ಟೆ.

ಸಂಪಾದಕೀಯದಲ್ಲೇ ಸೃಜನಶೀಲ ಸಾಹಿತ್ಯಕ್ಕೆ ಅನುಭವ-ಚಿಂತನೆಗಳೆರಡರ ಅಗತ್ಯದ ಕುರಿತು ಹೇಳುತ್ತಾ, ವೈಚಾರಿಕತೆಯ ಹೆಸರಿನ ಗೊಡ್ಡು ಅಕೆಡೆಮಿಕ್ ಭಯೋತ್ಪಾದನೆಯನ್ನೂ, ವೈಚಾರಿಕತೆಯನ್ನು ಸಾರಾಸಗಟಾಗಿ ನಿರ್ಜೀವ ಪಾಂಡಿತ್ಯ ಅಂತ ಪಕ್ಕಕ್ಕೆ ತಳ್ಳೋ ಸೋಮಾರಿತನವನ್ನೂ ಒಂದೇ ಸಲ ನಿವಾಳಿಸಿಹಾಕಿದ ವಿವೇಕರ ನಿರ್ದಾಕ್ಷಿಣ್ಯ ಮಾತುಗಳು ಭಾವ-ಬುದ್ಧಿಗಳ ಬ್ಯಾಲನ್ಸ್ ಏನಿರಬೇಕನ್ನೋ ಹುಡುಕಾಟಕ್ಕೆ food for thought ಆಗಿ ಸಂದವು.
ಪುಟಗಳು ತಿರುವಿಹಾಕ್ತಿದ್ದ ಹಾಗೇ ಅಲ್ಲಲ್ಲಿ ಓದಿದ್ದ - ಕೇಳಿದ್ದ ಹೆಸರುಗಳು ಕಂಡು, ಅಬ್ಬಾ! ನೆಲೆ ಕಂಡೆ ಅನ್ನೋ ಸಮಾಧಾನ ಗಟ್ಟಿಯಾಗ್ತಾ ಹೋಯ್ತು. ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬರುತ್ತಿದ್ದ ಅನುವಾದಗಳನ್ನ ಓದ್ತಿದ್ದಾಗ ಅನುವಾದಿತ ಸಾಹಿತ್ಯದಲ್ಲಿ ಎರಡು ಭಾಷೆ-ಸಂಸ್ಕೃತಿಗಳ negotiationನಲ್ಲಿ ಹುಟ್ಟುವ ವಿಚಿತ್ರ-ವಿಶಿಷ್ಟ ಸೊಗಡಿನಲ್ಲಿ ಕಳೆದುಹೋಗುತ್ತಿದ್ದೆ. ಆ ಅನುಭವವನ್ನ ವಿವೇಕ್ ಹಾಗೂ ಜಯಂತ್ ಕಾಯ್ಕಿಣಿಯವರು ಅನುವಾದಿಸಿರೋ ಐಸಾಕ್ ಬಾಶೆವಿಸ್ ಸಿಂಗರ್‍ನ ಕಥೆ ’ಮಳ್ಳ ಗಿಂಪೆಲ್’ ಮತ್ತೆ ನೆನಪಿಸಿತು.

ನಾನ್ಯಾಕೆ ಕಥೆ ಬರೆದಿಲ್ಲ ಅನ್ನೋದು ಈ ಸಲದ ಸಮಯಪರೀಕ್ಷೆಯಲ್ಲಿ ಕಥೆಗಾರರ ಬರಹಗಳನ್ನ ಹಾಗೂ ನಾನು ಇತ್ತೀಚೆಗೆ ಓದಿ ಮುಗಿಸಿದ ಇಂಗ್ಲಿಷ್ ಕಾದಂಬರಿ - ಲುನಾಟಿಕ್ ಇನ್ ಮೈ ಹೆಡ್ - ಓದುತ್ತಿದ್ದಂತೆ ಒಂದಿಷ್ಟು ಸ್ಪಷ್ಟವಾಗೋಕೆ ಷುರುವಾಯ್ತು. ಎಷ್ಟೋಸಲ ಅಂತರ್ಜಾಲದಲ್ಲಿ ಅಂತರಪಿಶಾಚಿಯಾಗಿ ಅಲೀತಿರುವಾಗ ದೊಡ್ಡ ಹೆಸರುಗಳ / ಅವರಂತೆ ಬರಿಯಹೋಗುವ ಮರಿಬರಹಗಾರರ ಕಥೆಗಳನ್ನೋದಿ ಕೊನೆಗೆ ಏನೂ ಅರ್ಥವಾಗದೇ ತಬ್ಬಿಬ್ಬಾಗಿ ನನ್ನ ಸಾಹಿತ್ಯಾಭ್ಯಾಸ ಕನ್ನಡಕ್ಕೆ ಸಲ್ಲದ್ದೋ, ಅಥವಾ ಕಲಿತದ್ದು ನಾನೇ ಮರೆತಿದ್ದೀನೋ, ಅಥವಾ ೨-೩ ವರ್ಷದಲ್ಲೇ ಔಟ್‍ಡೇಟೆಡ್ ಆಗಿಬಿಟ್ಟೆನೋ ಅನ್ನಿಸೋ ದಿಗ್ಭ್ರಾಂತಿಯ ಕ್ಷಣಗಳಿಗೆ ಇಲ್ಲಿ ವಸುಧೇಂದ್ರರ ಮಾತುಗಳು ಸಮಾಧಾನ ಹೇಳಿದವು! ಮಹಿಳಾ ಸಾಹಿತ್ಯದ ಬಗೆಗೆ ಸುಕನ್ಯಾ ಕನಾರಳ್ಳಿಯವರ ಸಾಲುಗಳನ್ನೋದುತ್ತಿದ್ದಾಗ ಫಣಿಯಮ್ಮನೊಂದಿಗಿನ ಎಂ ಫಿಲ್ ಯಾತ್ರೆಯ de javu ಭಾವನೆ....some shared grounds... ಡಯಸ್ಪೋರಾ ಕನ್ನಡಿಗರನ್ನ ಕಾಡೊ ಐಡೆಂಟಿಟಿ ಪಾಲಿಟಿಕ್ಸ್ ಬೆಂಗ್ಳೂರ್ ಕನ್ನಡಿಗರನ್ನೇನ್ ಬಿಟ್ಟಿಲ್ಲ ಅನ್ನಿಸಿಬಿಟ್ಟಾಗ ಆ shared grounds ಭಾವನೆಗೆ ಒಂದು ವಿಷಾದದ ನಂಟು...
ತೆರೆಮರೆಗಳಿಲ್ಲದೇ ಅತ್ಯಂತ ಪ್ರಾಮಾಣಿಕವಾಗಿ, ಸರಳವಾಗಿ ತನ್ನ ಕಥನ ಸತ್ಸಂಗದ ಸಾಂಗತ್ಯ ಅಂದುಬಿಡೋ ಸುನಂದಾ ಪ್ರಕಾಶ ಕಡಮೆ, ಆಲ್ಟರ್ ಈಗೋದ ಜೊತೆಯ ಸಂಭಾಷಣೆಯಾಗಿ ತಮ್ಮ ಕಥನದ ಕಥೆ ಬಿಚ್ಚಿಟ್ಟು ಪ್ರಶ್ನೆಗಳೆಬ್ಬಿಸೋ ಗುರುಪ್ರಸಾದ್ ಕಾಗಿನೆಲೆ...

ಹಲವು ಪ್ರಶ್ನೆಗಳಿಗೆ ಉತ್ತರಗಳು, ಇನ್ನೊಂದಷ್ಟು ಹೊಸ ಪ್ರಶ್ನೆಗಳು, ನನ್ನೊಳಗಿನ ಬರಹದ ತುಡಿತಕ್ಕೆ, ಬರೆಯಲಾರೆ ಅನ್ನಿಸೋ ಕ್ಷಣಗಳಿಗೆ... familiar ಅನ್ನಿಸುತ್ತಲೇ ಹೊಸ ವಿಚಾರಗಳನ್ನ ತೆರೆದಿಡುತ್ತ ಅತೀ ವೇಗದಲ್ಲಿ ಆತ್ಮೀಯರಾಗಿಬಿಡೋ ಜನರೊಂದಿಗಿನ ಸಹಚರ್ಯದಂತೆ ’ದೇಶಕಾಲ’ದ ಸಾಂಗತ್ಯ ಅನಿಸಿಬಿಡ್ತು. ಒಂದೊಂದು ಸಾಲೂ ಚಪ್ಪರಿಸಿ ಸವಿದಿದ್ದೀನಿ. ಒಂದೆರಡು ಬರಹಗಳನ್ನ ಹಬ್ಬದ ಹೋಳಿಗೆಯಂತೆ ನಾಳೆಗೆ ಉಳಿಸಿಕೊಂಡಿದ್ದೀನಿ, ಏಪ್ರಿಲ್ ಹದಿನೈದರ ವರೆಗೆ ಮುಂದಿನ ಸಂಚಿಕೆಗೆ ಕಾಯ್‍ಬೇಕಲ್ಲ!

ಅಂದಹಾಗೆ ಸಬ್‍ಸ್ಕ್ರಿಪ್ಶನ್ ಕಳಿಸೋವಾಗ ಹಿಂದಿನ ಸಂಚಿಕೆಗಳು ಸಿಗುತ್ವಾ ಅಂತ ಕೇಳಿದ ಒಂದು ಸಾಲಿಗೆ ಯಾವ್ ಯಾವ್ ಸಂಚಿಕೆಗಳು ಲಭ್ಯ ಅಂತ ದೇಶಕಾಲ ಟೀಮ್‍ನ ಎಸ್ಸೆಮ್ಮೆಸ್ಸೂ ಬಂತು ಅನ್ನೋದು ಈಗ ಅಷ್ಟೊಂದು ಆಶ್ಚರ್ಯದ ವಿಷ್ಯ ಅನ್ನಿಸಲ್ಲ್ವೇನೋ!

ಹಾಂ, ಮತ್ತೆ ಹೊದಿಕೆಯ ವಿನ್ಯಾಸದಲ್ಲಿನ ಕಥೆಗಾರರ ಹೆಸರಿನ ಯಾದಿಯಲ್ಲಿ ನಮ್ಮ ಬ್ಲಾಗಿಗರ ಹೆಸರುಗಳು ಅಲ್ಲಲ್ಲಿ ಮಿನುಗಿದ್ದೂ ವಾವ್ ಅನ್ನಿಸಿದ್ ವಿಷ್ಯ!

Friday, February 01, 2008

ಕಳೆಯದ ನಿನ್ನೆ
ಕೈಜಾರಿದ ನಾಳೆಗಳ ನಡುವೆ
ನಿಟ್ಟುಸಿರೊಂದಕ್ಕೆ
ನಿದ್ದೆಗೊಮ್ಮೆ ನಿತ್ಯಮರಣ
ಎದ್ದ ಸಲ ನವೀನ ಜನನ!

(ಕನ್ನಡ ಬ್ಲಾಗ್ ಲೋಕದ ಲೇಟೆಸ್ಟ್ ಸಾಂಕ್ರಾಮಿಕ - ಚುಟುಕರೋಗ, ಇದನ್ನು ಕವಿತೆಯಾಗಿ ಬೆಳೆಸದ ನನ್ನ ಸೋಮಾರಿತನಕ್ಕೆ ಎಕ್ಸ್‌ಕ್ಯೂಸ್!)

Monday, January 28, 2008

ನನ್ನದೊಂದು ಹೊಸ ಹಾಡು

ತುಂಬಾ ದಿನಗಳಿಂದ ತುಂಬಾ ಜನರಿಂದ ಹೇಳಿಸ್ಕೊಂಡು ಕೊನೆಗೂ ಸಂಗೀತಕ್ಕೆ ಮೀಸಲಾದ ಒಂದು ಬ್ಲಾಗ್ ಷುರು ಮಾಡ್ತಿದ್ದೀನಿ. "ಎಂದಿನಂತೆ ನಿಮ್ಮೆಲ್ಲರ ಅಭಿಮಾನ-ಪ್ರೀತಿಗಳು ನನ್ನ ಮೇಲಿರಲಿ, ಹೊಸ ಪಿಚ್ಚರ್ ಖಂದಿತ ಹೋಗಿ ನೋಡಿ, ನಿಮ್ಮ ಮನೆಯವ್ರನ್ನೂ ಕರ್ಕೊಂಡು ಹೋಗಿ" ಅಂತ ಕಿತ್ತೋಗಿರೋ ರೆಕಾರ್ಡ್ ಚಚ್ಚಲ್ಲ, ಆದ್ರೆ ಟೈಮ್ ಸಿಕ್ಕಾಗ ಇಲ್ಲೂ ಒಂದು ಇಣುಕು ಹಾಕಿ ಅನ್ನ್‌ತೀನಿ ಅಷ್ಟೆ:)

Thursday, January 10, 2008

ಹಣತೆಗೆ...

ಜೀವನೋತ್ಸಾಹ ಇದೆ ಅಂತ ಟವರ್ ಹತ್ತಿ ನಿಂತು ಕೂಗೋ ಅವಶ್ಯಕತೆ ಏನಿದೆ? ಇದೆ ರೀ, ಒಳಗೇ ಎಲ್ಲೋ ಸೋರಿಹೋಗುತ್ತಿರೋ ಭಾವಕ್ಕೆ, ಸೋರದಂತೆ ನಿಲ್ಲಿಸಲು ತುಂಬಿಕೊಳ್ಳಬೇಕಿರೋ ಚೈತನ್ಯಕ್ಕೆ...

ಸುತ್ತೆಲ್ಲ ಬಣ್ಣದಲೋಕ, ಕಾಯುತ್ತಿರೋ ನೂರು ನಲಿವು-ನೋವು...
ಒಳಗೆ ಬಿರುಗಾಳಿಗೆ ಸಿಕ್ಕ ಕಿರುಹಣತೆಯ ಭಾವ ಯಾಕೋ!ಉಸಿರುಕಟ್ಟಿಸುವಂಥ ಸ್ತಬ್ಧತೆಯೂ ಅಲ್ಲೇ! ಎಲ್ಲದರ ನಡುವೆ ಏನೂ ಆಗದಂತೆ ಕೂರುವ ವಿಗ್ರಹವಾಗೋ ಯಾವ ಹಂಬಲಗಳೂ ಇಲ್ಲ, ರತ್ನಖಚಿತ ಕಿರೀಟ ವಿಗ್ರಹಕ್ಕೇ ಇರಲಿ.
ಸಿನಿಕತನ ನುಸುಳದಂತೆ, ಕಿರುಹಣತೆ ಆರದಂತೆ ಕಾಯುವುದೊಂದೇ ಹಂಬಲ...
ಅದಕ್ಕೇ ಈ ಕೂಗು...ಇರಬಹುದು!

ಕ್ಲೀಷೆ ಅನ್ನಿಸಿದ್ರೂ ಈ ಕ್ಷಣದ ಹಾಡು ಅದೇ...
ದೀಪವು ನಿನ್ನದೇ ಗಾಳಿಯೂ ನಿನ್ನದೇ...
ಆರದಿರಲಿ ಅಂದುಕೊಂಡರೆ ಸಾಕೇನೋ, ಗಾಳಿ ಮಾತು ಕೇಳಬಹುದು! ಅಥವಾ ದೀಪವೇ ಸೆಟೆದು ನಿಲ್ಲಬಹುದು!

ಹಣತೆಯಾರಿದರೆ
ನೋವೇನು ನಲಿವೇನು
ಕತ್ತಲೆಯ ತುಣುಕುಗಳು
ಸವೆಸಿ ಮರೆಯುವ ಹಾದಿಕಲ್ಲುಗಳು...
ಬದುಕೆ?

ಕತ್ತಲೆಯ ಗುಡಿಯಲ್ಲಿ
ಶ್ರೀಮೂರ್ತಿ ಕಂಗೊಳಿಸೆ
ಬೇಕೊಂದು ಪುಟ್ಟ ಹಣತೆ
ಕಲ್ಲಿನಲಿ ಕಾಯುವನ ತೋರಿ
ನಮಿಸೆ