Monday, September 25, 2006

ನಿನ್ನೆ ನಿನ್ನೆಗೆ ಇಂದು ಇಂದಿಗೆ...

'ಹಿಂದೊಂದು ಚೆಂದದ ಕಾಲವಿತ್ತು' ಅಂತ ಹಾಲುಹಲ್ಲು ಬೀಳೋ ಮೊದಲೇ ಯಾಕೆ ಷುರು ಹಚ್ಚ್ಕೋತೀವಿ ನಾವುಗಳು? ನಾಸ್ಟಾಲ್ಜಿಯಾ ಯಾಕೆ ನಮಗಷ್ಟು ಅಪ್ಯಾಯಮಾನ? ನನಗೆ ಚೆನ್ನಾಗಿ ನೆನಪಿದೆ, ಕಾಲೇಜಿನ ದಿನಗಳಲ್ಲಿ, ಆಹಾ ಆ ಸ್ಕೂಲ್ ದಿನಗಳು ಮತ್ತೆ ಬರುತ್ವಾ ಅಂತ ಹದಿನಾರರ ಹರೆಯದಲ್ಲಿ ಜೀವನದಲ್ಲಿ ಆಗ್ಲೇ ಕಳೆದುಹೋಗಿದ್ದರ ಲೆಕ್ಕ! ಕಾಲೇಜು ದಿನಗಳು ಕಳೆದಾಗ ಅಯ್ಯೋ ಆ golden days ಆಗಿಹೋಯ್ತಲ್ಲ ಅಂತ ಕ್ಯಾಂಟೀನ್,crush, ಬೈಯ್ಯೋ ಲೆಕ್ಚರರ್ಸ್, ಕ್ಲಾಸ್ ಬಂಕ್ ಮಾಡಿ 'ರಿಹರ್ಸಲ್' ಅನ್ನೋ ಹೆಸರಲ್ಲಿ ಆಡ್ತಿದ್ದ ಆಟಗಳು, ಹೊತ್ತುಗೊತ್ತಿಲ್ಲದೇ ನಡೆಸುತ್ತಿದ್ದ ಹರಟೆ sessionಗಳು...ಎಲ್ಲ ಒಂದೇ ಸಲ ಸುನಾಮಿ ಥರ ಆವರಿಸಿಕೊಳ್ಳೋದು! ಇವತ್ತಿಗೂ ಕಾಲೇಜ್ ಸ್ನೇಹಿತರೆಲ್ಲ ಸಿಕ್ಕಾಗ ಈ ನಾಸ್ಟಾಲ್ಜಿಯ ಟ್ರಿಪ್ ಹೋಗಿ ಬರದಿದ್ದ್ರೆ ಅದು incomplete!

ನಾಸ್ಟಾಲ್ಜಿಯಾ ಇಲ್ಲದಿದ್ದ್ರೆ ಅದರ ಜಾಗದಲ್ಲಿ ಕನಸುಗಳು ಬೆಚ್ಚಗೆ ಬಂದು ಕೂತುಬಿಡುತ್ತ್ವೆ. ನಾನು ಹೀಗೆ ಮಾಡ್ಬೇಕು, ಇದು ಹಾಗೆ ಆಗ್ಬೇಕು...ಹೀಗಾದ್ರೆ ಚೆನ್ನ, ಹಾಗಾದ್ರೆ ಚೆನ್ನ...

ನಮ್ಮ ನೆನ್ನೆ ನಾಳೆಗಳನ್ನ ಪ್ರೀತಿಸೋ ಅಷ್ಟು ನಮ್ಮ ಇಂದಿನ ಅನುಭವಗಳನ್ನ ಪ್ರೀತ್ಸೋದು ಕಲಿಯೋಕೆ ಆಗುತ್ತಾ? ನೆನಪು - ಕನಸುಗಳಿಗೆ ಇಷ್ಟು ಪ್ರೀತಿ ತೋರಿಸೋದಕ್ಕೆ distance lends enchantment ಅನ್ನೋದು ಕಾರಣವಿರಬಹುದಾ? ಅಥ್ವಾ ನೆನ್ನೆ ನಾಳೆಗಳ ಯೋಚನೆಗೂ ಸಮಯ ಕೊಡದೇ ನಮ್ಮ್ಮ ಇಂದಿನ ಕ್ಷಣವನ್ನ ಆವರಿಸೋದೇ ಪ್ರೀತಿನಾ?

P.S: ಕೆಲಸ-ಬದುಕುಗಳಲ್ಲಿ ಮುಳುಗಿ ಹೀಗೇ ಸುಮ್ಮ್ನೆ long break ತೆಗೆದುಕೊಂಡುಬಿಟ್ಟಿದ್ದೆ...ಏನ್ರೀ ಬರೀತಾನೇ ಇಲ್ಲ ಅಂತ ಇಲ್ಲಿ, ಮೈಲ್ ಮೂಲಕ...ಆತ್ಮೀಯತೆಯಿಂದ ವಿಚಾರಿಸಿಕೊಂಡ, ಬರೀದೇದ್ರೆ ನೋಡಿ ಅಂತ ಧಮ್ಕಿ ಕೊಟ್ಟ ಎಲ್ಲ ಪ್ರೀತಿಯ ಸ್ನೇಹಿತರಿಗೆ ನನ್ನವೆರಡು ಪುಟ್ಟ sorry ಮತ್ತು ಧನ್ಯವಾದಗಳು:)

Sunday, July 02, 2006

ಚಿನಕುರುಳಿ ಪಟಾಕಿ!

ಪ್ರ: "ಅವ್ಳು ನಿನಗೇನಾಗ್ಬೇಕು?"
ಉ: "ಅಕ್ಕ ಆಗ್ಬೇಕು"
(ಎರಡು ಸೆಕೆಂಡ್ ಮೌನ)
"ಆದ್ರೆ ನಾನು ಅವ್ಳಿಗೆ ಏನೂ ಆಗಲ್ಲ!"

ಮೂರು ವರ್ಷದ ಮುದ್ದಿನ ಮುದ್ದೆಯ ಬಾಯಲ್ಲಿ ಈ ಮಾತು ಕೇಳಿ ಒಂದ್ ನಿಮಿಷ ಹಾಗೇ ಶಾಕ್ ಆಗಿ ಕೂತ್ವಿ ನಾವು!
ಹಾಗೇ ಈ ಮಾತನ್ನ ಮೆಲುಕು ಹಾಕ್ತಿದ್ದಾಗ ಭಾಷೆ, ಬಾಂಧವ್ಯಗಳೆರಡಕ್ಕೂ ನಮ್ಮ ಚಿನ್ನುಮರಿ ಕೊಡೋ ಪ್ರಾಮುಖ್ಯ ನಾವು ಕೊಡಲ್ಲ ಅನ್ನೋ ಸತ್ಯ flash ಆಗಿ ಆ ಪುಟ್ಟಿಯ ಪ್ರಪಂಚಕ್ಕೂ ನಮ್ಮದಕ್ಕೂ ಇರೋ ಕಂದಕವನ್ನ ಎತ್ತಿ ತೋರ್‍ಸ್ಬಿಡ್ತು!


ಆಡೋ ಮಾತಿಗೂ ಮಿಡಿಯೋ ಹೃದಯಕ್ಕೂ ಇರೋ ಲಿಂಕ್ ಗಳನ್ನೆಲ್ಲ ಗುಜರಿ ಅಂಗಡಿ ಪಾಲು ಮಾಡಿಬಿಡ್ತೀವಾ ಬೆಳೀತಾ ಬೆಳೀತಾ... ಹಾಗಿದ್ದ್ರೆ ಅದು ಬೆಳೆಯೋದು ಹೇಗಾಯ್ತು...ಅಕ್ಕ ಅನ್ನೋ ಅಕ್ಕರೆ ಇದೆಯೋ ಇಲ್ಲ್ವೋ, ಬಾಯಿ ಅದರ ಪಾಡಿಗೆ ಅದು ಅಭ್ಯಾಸಬಲದ್ ಮೇಲೆ ಕೆಲಸ ಮಾಡುತ್ತಾ... ಅಥವಾ ಮಾತಿಗೂ ಮನಸ್ಸಿಗೂ ಮಧ್ಯ ಇರೋ ಅಂತರವನ್ನ ಅಳೀಸೋ ಧಾರ್ಷ್ಟ್ಯ ವಯಸ್ಸಾದ್ ಹಾಗೇ ಕರಗಿ ಬಿಡುತ್ತಾ...
ಎಲ್ಲವೂ taken for granted ಆಗಿ ಇವಕ್ಕೆಲ್ಲ ಅರ್ಥವೇ ಕಳೆದುಹೋಗುತ್ತಾ ನಮ್ಮ್ ಬದುಕಿನಲ್ಲಿ...ಅರ್ಥ ಹುಡುಕಿ ಕೂರೋ ವ್ಯವಧಾನದ ಕೊರತೆನೋ...

ಹೀಗೇ ಕಣ್ಣಿಗೆ ಪಟ್ಟಿ ಕಟ್ಟ್ಕೊಂಡು ರೇಸ್ ಓಡ್ತಿರೋ ನಮಗೆ ಒಂದು ಕ್ಷಣ ಬೆಚ್ಚಿ ಕಣ್ಣಗಲಿಸೋ ಹಾಗೆ ಶಾಕ್ ಕೊಡೋಕೆ ಈ ಪುಟ್ಟಿ ಇದಾಳಲ್ಲ ಅಂತ ಅಲ್ಲೇ ಒಂದು ಪುಟ್ಟ ಸಮಾಧಾನ ಮಾಡ್ಕೊಂಡಿದ್ದೂ ಆಯ್ತು!

ಪುಟ್ಟಕ್ಕನ ಪಾರ್ಟಿಂಗ್ ಶಾಟ್:
ನಮ್ಮ ಭಾವ (ಅವಳ ತಂದೆ) ಅವಳನ್ನ್ ಕೇಳಿದ್ರು, "ಸೋನು, ನಿಂಗೆ 'B' ಬರಿಯೋಕೆ ಬರುತ್ತಾ?"
ಅವಳ ಬತ್ತಳಿಕೆಯಲ್ಲಿ ಅದಕ್ಕೂ ಉತ್ತರ ರೆಡಿ! - "ನಂಗೆ 'B' ಬರ್ಯೋಕೆ ಬರಲ್ಲ, 'B' ಮೇಲೆ ಕೂತ್ಕೊಳ್ಳೋಕೆ ಬರುತ್ತೆ!"(ಪಾರ್ಕಿನಲ್ಲಿ ಮಕ್ಕಳ ಆಟಕ್ಕೆ A, B, C etc ಹಾಕಿರ್ತಾರಲ್ಲ - ಅದರ ಬಗ್ಗೆ ಸೋನು ಕೊಚ್ಚಿಕೊಂಡಿದ್ದು!:))

Sunday, June 18, 2006

ಒಂದು retrospection?

ಬರೆದು ತಿಂಗಳ ಮೇಲಾಯ್ತು...ಎಲ್ಲಾ ಸ್ನೇಹಿತರ ಹತ್ರ ಬೈಸಿಕೊಂಡಾಯ್ತು...ಕನ್ನಡಸಾಹಿತ್ಯ.ಕಾಂ ನ ಸಂಪಾದಕೀಯದಲ್ಲಿ ನನ್ನ ಬ್ಲಾಗ್ ಬಗ್ಗೆ ನೋಡಿ ಟೆನ್ಶನ್ ಆಗಿದ್ದೂ ಆಯ್ತು... ವಿಷಯಗಳ, ಭಾವಗಳ backlog ಭಾರವಾಗಿ ಇನ್ನು ಬರ್ಯೋದೇ ಸರಿ ಅಂತ ಈಗ ಕೂತಿದೀನಿ. ನಿಮ್ಮಗಳ ದುರಾದೃಷ್ಟ ಇವತ್ತು!:))

ಕನ್ನಡಸಾಹಿತ್ಯ.ಕಾಂನಲ್ಲಿ ಶೇಖರ್ ಪೂರ್ಣ ಅವರ ಸಂಪಾದಕೀಯದ ಲಿಂಕ್ ಗೆಳೆಯರೊಬ್ಬ್ರು ಕಳಿಸಿದಾಗ ಓದಿ ಮೊದ್ಲಿಗೇನೋ ಸ್ವಲ್ಪ ಖುಷಿನೇ ಆಯ್ತು. ಅದೇ ಖುಷಿಯಲ್ಲಿ ನಾಕಾರು ಗೆಳೆಯರಿಗೆ ಮೈಲ್ ಮಾಡಿ ಲಿಂಕ್ ಕೊಟ್ಟಿದ್ದೂ ಆಯ್ತು. ಆದ್ರೆ ಆಮೆಲೆ ಹಾಗೇ ಕೂತಾಗ ಕೆಲವು ಪ್ರಶ್ನೆಗಳು ಬಂದ್ವು. ಇವತ್ತು ಅವುಗಳ್ ಬಗ್ಗೆನೇ ಮೊದ್ಲು ಬರೆದುಬಿಡ್ತೀನಿ.

ಬ್ಲಾಗ್ ಅನ್ನೋದು ಒಂದು ಮಾಧ್ಯಮ - ಅದನ್ನ್ ಯಾರ್ ಯಾರು ಹೇಗ್ ಬಳಸ್ಕೋತಾರೆ ಅವರವ್ರಿಗೆ ಬಿಟ್ಟಿದ್ದು... canonical ಸಾಹಿತ್ಯದ parameters ಅದಕ್ಕೆ apply ಮಾಡಬೇಕಾ? ಬೇರೆ ಭಾಷೆಗಳಲ್ಲಿ ಬ್ಲಾಗ್ ಗಳಿಗೆ ಇಷ್ಟು ಗಮನ ಕೊಡ್ತಿದಾರಾ? ಬ್ಲಾಗ್ ಅನ್ನೋದು ಮಲ್ಟಿನ್ಯಾಷನಲ್ ಗ್ಲೋಬಲಿಸ್ಮ್ ನ ಐಡಿಯಾಲಜಿಯನ್ನೂ ತನ್ನ ಜೊತೆಗೆ ತರುತ್ತೆ. ಕಂಪ್ಯೂಟರ್ ಇದ್ದವ್ರಿಗೆಲ್ಲ ಖಾಲಿ ಸ್ಲೇಟ್ ಒದಗಿಸುತ್ತೆ. ಅದರಲ್ಲಿ ಸಾಹಿತ್ಯವೇ ಗೀಚ್ಬಹುದು, ಕಾಡು ಹರಟೆಯನ್ನೇ ಕುಟ್ಟ್ಬಹುದು, ಡೈರಿನೇ ಬರೆದಿಡ್ಬಹುದು. ಬರೆದದ್ದೆಲ್ಲ ಸಾಹಿತ್ಯ ಆಗೊಲ್ಲ ಅಲ್ಲ್ವ?

ಹೀಗೇ ಯೋಚಿಸ್ತಾ ನಾನ್ ಯಾಕೆ ಬ್ಲಾಗ್ ಬರೀತೀನಿ ಅಂತ ಪ್ರಶ್ನೆನೂ ಬಂತು. ಸುಮ್ಮ್ನೆ ಒಂದ್ಸಲ ಇಲ್ಲಿಯವರ್ಗೆ ಬರೆದಿದ್ದನ್ನ ನೋಡ್ದೆ...ಶೇಖರ್ ಸರ್ ಹೇಳಿರೋಹಾಗೆ ಯಾವ್ದೋ ಭಾವಜೀವನದ ತುಣುಕುಗಳೆ ಹೆಚ್ಚು ಕಂಡ್ವು. ಆದ್ರೆ ಅದನ್ನ್ ಬಿಟ್ಟು ಬೇರೆ ಥರದವೂ ಇವೆ. ಆದ್ರೆ ನೋಡ್ತಾ ನೋಡ್ತಾ ಭಾವಗಳ ಭರಪೂರಕ್ಕಿರೋ ಶಕ್ತಿ ಇಲ್ಲದೇ ಸುಮ್ಮ್ನೆ ತೋಚಿದ್ದು ಗೀಚಿದ್ದು, ಕೆಲವು ಬರೀಬೇಕನ್ನೋ ಬಲವಂತಕ್ಕೆ ಬರೆದಿದ್ದೇನೋ ಅಂತಲೂ ಅನ್ನಿಸ್ತು. ಹಾಗೇ ನಾನ್ಯಾವ ಘನವಾದ ಸಾಹಿತ್ಯ ರಚನೆಯಲ್ಲಿ ತೊಡಗಿದೀನಿ ಅನ್ನೋ ಭ್ರಮೆ ನನ್ನನೇನ್ ಕಾಡಿಲ್ಲ ಅನ್ನಿಸ್ತು...
'ವನಸುಮದೊಲೆನ್ನ...'ಬ್ಲಾಗ್ ನನ್ನಷ್ಟಕ್ಕೆ ನಾನು ನನ್ನಿಷ್ಟಕ್ಕೆ ಬೇಕಾದ್ದು ಗೀಚಿ ಹಾಕುವ ಗ್ರಾಫಿಟಿ ಗೋಡೆ ಆಗಿದೆ ಅನ್ನಿಸ್ತು...ಅದರ ಜೊತೆಗೇ ಸ್ನೇಹಿತರೊಬ್ಬರು ಇದು loss of relative privacy ಅಂತ ಹೇಳಿದ್ದ್ ಮಾತೂ ನೆನಪಾಯ್ತು...ತೀರ ನನ್ನಷ್ಟಕ್ಕೆ ಬರಿಯೋಕೆ ಡೈರಿ ಇದೆಯಲ್ಲ ಅನ್ನೋ ಮಾತೂ ಮನಸ್ಸಲ್ಲಿ ಹಾದು ಹೋಯ್ತು. ನಾಕು ಜನ ಓದ್ಲಿ ಅನ್ನೋ ಆಸೆ ಎಲ್ಲೋ ಒಂದುಕಡೆ ಇದ್ದೇ ಇದೆ, ನಿಜ, ಅದರ್ ಬಗ್ಗೆ apologetic ಆಗಬೇಕಿಲ್ಲ, ಹಾಗಂತ ನಾಕ್ ಜನ ಓದ್ತಾಅರೆ ಅನ್ನೋ ಮಾತ್ರಕ್ಕೆ ಇದು ಯಾವ್ದೇ ಸೀರಿಯಸ್ ಸಾಹಿತ್ಯಿಕ ಆಸಕ್ತಿಗಳಿಗೆ alternative ಆಗೋದಿಲ್ಲ ಅನ್ನೋ ನಂಬಿಕೆ...

ಬರಿಯೋದು ಖುಷಿಯ ಕೆಲ್ಸ ಅಂತ ಬ್ಲಾಗಿಗೆ ತಗುಲಿಕೊಂಡಿದ್ದೀನಿ...ಆದ್ರೆ ಬದುಕು attention ಕೇಳ್ದಾಗ ಬ್ಲಾಗ್ ಮೌನ ತಾಳುತ್ತೆ... ಸಹನೀಯವೋ ಅಸಹನೀಯವೋ, ನನ್ನ್ choice ಅದೇ... ನನ್ನನ್ನ ಹೊಗಳಿ, ತಿವಿದು, ಓಲೈಸಿ ಬರೀ ಅಂದ ಎಲ್ಲ ಗೆಳೆಯರಿಗೂ thanks:) ಜೀವನ extremes ಕಡೆ ಹೋಗದಿದ್ದಾಗಲೆಲ್ಲ ಇಲ್ಲಿ ಹರಟುತ್ತಾನೇ ಇರ್ತೀನಿ ಅಂತ promise ಮಾಡ್ತಾ...
ಶ್ರೀ

Sunday, April 23, 2006

ಗುನುಗುತ್ತಿರೋ ನಾಕು ಸಾಲುಗಳು, ಅಣ್ಣಾವ್ರು....ಹೀಗೇ...

ಸಾವಿರ ದಾಟಿ ಇನ್ನೇನು ತಿಂಗಳಾಗುತ್ತೆ...ಬರೆದು ಹಾಕೋ ವಿಷಯಗಳು ನೂರಿವೆ ತಲೆಯಲ್ಲಿ...ಇವತ್ತೆಷ್ಟು ಬರಿಯಬಲ್ಲೆ ಗೊತ್ತಿಲ್ಲ. ನಿದ್ದೆ ಕಣ್ಣುತುಂಬೋ ಮೊದಲು ಇವತ್ತು ಕೇಳಿದ ಕೆಲವು ಹಾಡುಗಳನ್ನ ಮೆಲುಕು ಹಾಕ್ತಾ ಇದೆ ಮನಸ್ಸು. ನಾಕು ಸಾಲು ಗೀಚಿಬಿಡ್ತೀನಿ...ಒಳ್ಳೆ ಹಾಡುಗಳು, ನನಗೇ ನಾಳೆ ಮರೆತಾಗ ಇಲ್ಲಿ ಬಂದು ಓದಿಕೊಳ್ಳೋಕಾಗುತ್ತೆ!

ವ್ಯಾಸರಾಯರ ಕವನ ಇ-ಟಿವಿಯಲ್ಲಿ ಎದೆ ತುಂಬಿ ಹಾಡಿದೆನು'ನಲ್ಲಿ ಸೊಗಸಾಗಿ ಹಾಡಿದ್ರು ಶಿವಮೊಗ್ಗದವ್ರೊಬ್ಬ್ರು. ಆಹ್! ಒಳ್ಳೆ ಗಝಲ್ ಧಾಟಿಯಲ್ಲಿದೆ ಸಾಹಿತ್ಯ:
ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ಅದೇ ಪ್ರೋಗ್ರಾಮ್ನಲ್ಲಿ ಕೇಳಿದ ಇನ್ನೊಂದು ಹಾಡು:
ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬಾ ಪ್ರೀತಿ
ಈಗ ಯಾಕೆ ಧ್ವನಿಸುತ್ತಿದೆ(?) ಏನೋ ಶಂಕೆ ಭೀತಿ

ಹಾಗೇ ಚಾನೆಲ್ ಸರ್ಫ್ ಮಾಡ್ತಾ ಅಣ್ಣಾವ್ರ ಹಿಟ್ಸ್ ಕೇಳಿ ಮತ್ತೊಮ್ಮೆ ಸೋತೆ ನಾನಾಗ!:)
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ... ಅತಿ ಮಧುರ ರೀ ಆ ಹಾಡುಗಳು! ಅಣ್ನಾವ್ರು ಅವರ ವರ್ಚಸ್ಸು ಉಪಯೋಗ್ಸಿ ಜನರಿಗೆ ಬೇರೆ ಏನ್ ಮಾಡಿದ್ರೋ ಬಿಟ್ಟ್ರೋ ನನಗೆ ಅದು ಬೇಕಿಲ್ಲ! ಸದಭಿರುಚಿಯ ಮನೋರಂಜನೆ ಅಂದ್ರೇನು ಅಂತ ಕನ್ನಡಿಗರಿಗೆ ಒಂದು standard set ಮಾಡಿದ್ರು! ಆ ಅಭಿನಯ, ಭಾಷೆ...ಉಫ್! ರವಿ ಬೆಳಗೆರೆಯವ್ರು ಹೇಳಿದ್ ಒಂದು ಮಾತು ಭಾಳಾ ಹಿಡಿಸ್ತು - ಅಣ್ಣಾವ್ರನ್ನ ನಮ್ಮೆಲ್ಲರ ಪ್ರೀತಿಯ ಕನ್ನಡ ಮೇಷ್ಟ್ರು ಅಂದಿದ್ದು!

ಚಿಕ್ಕ ವಯಸ್ಸ್ನಲ್ಲಿ ಎದುರು ಮನೆಗೆ ಹೋಗಿ (ಆಗ ನಮ್ಮನೇಲಿ ಟಿವಿ ಇರ್ಲಿಲ್ಲ!) ಆಂಟಿ ಕೊಟ್ಟ ಕಡ್ಲೇಪುರಿ ತಿನ್ನುತಾ ನೋಡ್ತಿದ್ದ ಅಣ್ನಾವ್ರ black n white ಚಿತ್ರಗಳು ಇವತ್ತಿಗೂ ಮನಸ್ಸಲ್ಲಿ ಹಸಿರಾಗಿವೆ! ನರಸಿಂಹರಾಜು, ಬಾಲಕೃಷ್ಣ ಅವರುಗಳ ಜೊತೆಯಲ್ಲಿನ ಹಾಸ್ಯ, ಕಲ್ಪನಾ, ಮಂಜುಳಾ, ಭಾರತಿ...ಆ ರೊಮ್ಯಾನ್ಸ್... ಆ ಆದರ್ಶಪುರುಷನ ರೋಲ್ ಗಳು...ಅಣ್ಣಾವ್ರಿಗೆ ಉತ್ತರ ಇಲ್ಲ ಬಿಡ್ರೀ! ಇವತ್ತು ಕಡ್ಲೇಪುರಿ ಕೊಡ್ತಿದ್ದ ಆಂಟಿನೂ ಇಲ್ಲ, ಕಣ್ಣಿಗೆ, ಕಿವಿಗೆ ಹಬ್ಬವಾಗಿದ್ದ ಅಣ್ಣಾವ್ರೂ ಇಲ್ಲ... ಆದ್ರೆ ಅಣ್ಣಾವ್ರ ಚಿತ್ರಗಳು ನಮ್ಮ ಜೊತೆ ಯಾವಾಗ್ಲೂ ಇರುತ್ತ್ವೆ...ಅವುಗಳನ್ನ್ ನೋಡ್ದಾಗ ನೆನಪಿನ ಭಿತ್ತಿಯಲ್ಲಿ ಎಲ್ಲೋ ಕಳೆದುಹೋಗಿದ್ದ ಆಂಟಿಯ ನೆನಪೂ ಸುಳಿದ ಕಿರುನಗೆಯಂತೆ....

ಅಣ್ಣಾವ್ರು ಹೋಗ್ಬಿಟ್ಟ್ರು ಅನ್ನೋ ನ್ಯೂಸ್ ತಿಳಿದಾಗ ಸಡನ್ನಾಗಿ ಆವರಿಸಿದ ಖಾಲಿತನ ಈಗ ನಿಧಾನಕ್ಕೆ ಕರಗ್ತಿದೆ. ಅಣ್ಣಾವ್ರು ಹೋಗೋದು ಅಸಾಧ್ಯ ಅನ್ನೋ ಅರಿವು ಬರ್ತಿದೆ.
ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ...
ಆ ಇನ್ನೋಸೆಂಟ್ ನಗೆ ಆಗೀಗ ಟಿವಿಯಲ್ಲಿ ಮಿಂಚಿ ನಾನಿಲ್ಲೇ ಇದ್ದೀನ್ರಪ್ಪಾ, ಅನ್ಯಾಯವಾಗಿ ಬೆಂಕಿ ಹಚ್ಚಬೇಡಿ ನನ್ನ್ ಹೆಸರಲ್ಲಿ ಅನ್ನ್ತಿರೋ ಹಾಗನ್ನ್ಸುತ್ತೆ!

Tuesday, April 18, 2006

You Should Be A Poet
You craft words well, in creative and unexpected ways.And you have a great talent for evoking beautiful imagery...Or describing the most intense heartbreak ever.You're already naturally a poet, even if you've never written a poem.