iruvudellava biTTu iradudaredege tuDivude jeevana... to leave behind what we have and long for things that are not there is life...is the rough translation of these beautiful lines of Kannada poetry by Gopalakrishna Adiga, from the popular song - 'yaava mOhana muraLi kareyito'...they sum up our lives in a way nothing else can... this constant look out called life...
Sunday, April 25, 2010
ಶೃಂಗೇರಿಯಲ್ಲಿ ನಾಕು ಹೆಜ್ಜೆ...
ಶೃಂಗೇರಿಗೆ ಒಂದು ದಿನದ ಪುಟ್ಟ ಟ್ರಿಪ್ ಮುಗಿಸಿ ಬರೋವಾಗ ಹೊರಗೂ ಒಳಗೂ ಮಳೆ...
ಬಾಲ್ಯದ ಬೇಸಿಗೆ ರಜಗಳಲ್ಲಿ ವಾರಗಟ್ಟಲೆ ಹೋಗ್ತಿದ್ದ ದಿನಗಳನ್ನ ನೆನಪಿಸಿಕೊಂಡಾಗ ನಿಜವಾ ಅನ್ನಿಸೋ ಅಷ್ಟು ಬದಲಾಗಿದೆ, ಎಲ್ಲ!
ಬೆಂಗಳೂರಂದ್ರೆ ಬೆರಗುಗಣ್ಣಾಗೋ ಪುಟ್ಟ ಊರು,ಜಗುಲಿಯಲ್ಲಿ ಕೂತು ಓದುತ್ತಿದ್ದ ಆ ಹಳೆಯ ಮಯೂರ/ಸುಧಾ ಸಂಚಿಕೆಗಳು, ಮನೆಯ ಹಿತ್ತಲಿನ 'ಸಣ್ಣ್ ಹೊಳೆ'(ಹರಿವು ಕಮ್ಮಿಯಿರೋ ಈಗ ಪಾರ್ಕಿಂಗ್ ಲಾಟ್ ಆಗಿರೋ ಹೊಳೆ ದಂಡೆ)ಯಲ್ಲಿ ಆಟ... ಅಲ್ಲಿನ ಮೀನುಗಳೂ ಪುಟ್ಟ ಪುಟ್ಟವು!
ಹಿತ್ತಲ ಬಿಳಿ ಗುಲಾಬಿ ಮೊಗ್ಗುಗಳ 'ಹೇರ್ ಬ್ಯಾಂಡ್'(ಜೊತೆಗೆ ಅದು ಪ್ರತಿಷ್ಠಾಪಿತವಾಗ್ತಿದ್ದ ಆ ಎರಡು ಜಡೆಗಳು!)...ಅಬ್ಬಲಿಗೆ?(ನನ್ನ್ ಪ್ರಕಾರ ಕನಕಾಂಬರದ ದೊಡ್ಡಕ್ಕ), ಪಿಂಕ್ ಸ್ಫಟಿಕ...
ಕೆಂಪಕ್ಕಿ ಅನ್ನದ ಜೊತೆ ಘಮ್ಮನ್ನೋ ಮಿಡಿಮಾವಿನಕಾಯಿ ಉಪ್ಪಿನಕಾಯಿ(ಬಾಟಲ್ ತುಂಬಿ ಬೆಂಗಳೂರಿಗೂ ಬರುತ್ತಿತ್ತು!)...ಸಂಜೆಯ ದೇವಸ್ಥಾನದ ವಿಜಿಟ್, ಅತ್ತೆ ಮಾಡ್ತಿದ್ದ ಚಕ್ಕುಲಿ, ರವೆ ಉಂಡೆ, ತಂಬುಳಿ, ಚಟ್ನಿ...ಮಠದ ಊಟದ 'ಮಣಿ ಮಣಿ ಪಾಯ್ಸ'
ಪ್ರೀತಿಯ ತಾತನ ನಿತ್ಯ ತುಂಗಾ ಸ್ನಾನ, ಪೂಜೆ, ಹಲಸಿನ ಹಣ್ಣು, ಕಾಫಿ ಪುಡಿ ಮಷೀನು, ಸೊಸೆ-ಮೊಮ್ಮಕ್ಕಳಿಗೆ ಮಾತ್ರ ಮಾಯವಾಗ್ತಿದ್ದ 'ದೂರ್ವಾಸ ಕೋಪ'!:)....
ಕಳೆದ ಆ ಸರಳ ಸುಂದರ ಪುಟ್ಟ ಪ್ರಶಾಂತ ಪ್ರಪಂಚಕ್ಕೆ ನೆನಪಿನ ಸಿಹಿಯ ಕೊಡುಗೆ ಎಷ್ಟಿದೆಯೋ ಗೊತ್ತಿಲ್ಲ!:)
ಗಂಟೆಗಟ್ಟಲೇ ನಿಧಾನಕ್ಕೆ ಕೂತು ಶಾರದೆಯ ಜೊತೆ ಹೊಡೆಯುತ್ತಿದ್ದ ಲೋಕಾಭಿರಾಮದ ಹರಟೆ ಈಗ 'ಮುಂದ್ ಹೋಗಿ' ಕೂಗುಗಳಿಗೆ ಬಲಿ!
ಮಾವಿನ ಮಿಡಿಗಳೆಲ್ಲ ಒಂದಲ್ಲದೇ ಹತ್ತು ಹಲವಾಗಿ ತುಂಬಿರೋ ಸಂಡಿಗೆ-ಹಪ್ಪಳ-ಉಪ್ಪಿನಕಾಯಿ ಅಂಗಡಿಗಳ ಡಬ್ಬಗಳಲ್ಲಿ!
ಬೆಟ್ಟಕ್ಕೆ ಹೋಗೋ ದಾರಿಯಲ್ಲಿ ಅಜ್ಜಿಯ ತಮ್ಮನ ಮನೆ, ಸರಸ್ವತಮ್ಮ ನೆನಪಾಗಿ ಸಂದ ಮೇಲೀಗ ಬರೀ ನೆನಪು...
ಅನಂತ ಹೊಳ್ಳರ ಕ್ಯಾಂಟೀನಿನಲ್ಲಿ ಇನ್ನು ಅನಂತ ಹೊಳ್ಳರಿಲ್ಲ. ಇಡ್ಲಿ-ವಡೆ-ದೋಸೆ-ಬಜ್ಜಿ ಟಿಫನ್ ಸೆಂಟರುಗಳಲ್ಲಿ ಈಗ ಸಂಜೆ ಮ್ಯಾಗಿ ಲಭ್ಯ! ಕರಿಬೇವಿನ ಒಗ್ಗರಣೆ ಹಾಕಿದ ಗೋಬಿ ಮಂಚೂರಿಯನ್ನೂ ಶೃಂಗೇರಿಗೆ ಬಂದಾಯ್ತು!!
ತಾತ ಇದ್ದ ಮೂರು ಮನೆಗಳಲ್ಲಿ ಒಂದು ಯಾತ್ರಿ ನಿವಾಸ್ ಗೆ ದಾರಿ ಬಿಟ್ಟು ವರ್ಷಗಳಾಯ್ತು. (ಆದ್ರೂ ಮಠದ ವಸತಿಗೃಹಗಳಲ್ಲಿ ಈಗ ರಜಾ ದಿನಗಳೆಲ್ಲ 'ಹೌಸ್ಫುಲ್'! ಒಂದು ದಿನಕ್ಕೆ ಸಿಗಬಹುದು, ಎರಡು ದಿನ ಕಷ್ಟ, ವಾರ ವಾರ ಇರೋದು ಇನ್ನು ಕನಸು!)
ಎರಡನೆಯದ್ದು ಈಗ ಅಂಗಡಿಸಾಲಿಗೆ ಸೇರಾಯ್ತು. 'ತಾತನ ಮನೆ' ಅನ್ನೋ ನೆನಪಿಗೆ ಉಳಿದಿರೋ ಕೊನೆಯ ಲಿಂಕ್ ಮೂರನೆಯದ್ದು ಯಾವತ್ತು ಏನಾಗುತ್ತೆ ಅಂತ ಯೋಚಿಸುತ್ತಾ, ನಮ್ಮ ನಾಸ್ಟಾಲ್ಜಿಯಾ ಹಳಹಳಿಕೆಗಳಿಗೆ ಊರು ನಿಂತಲ್ಲೇ ನಿಲ್ಲೋಕಾಗುತ್ತಾ ಅಂತ ಸಮಾಧಾನ ಮಾಡಿಕೊಳ್ತಾ, ಶೃಂಗೇರಿಯಲ್ಲೊಂದು ಪುಟ್ಟ ಮನೆ ಅನ್ನೋ ಅಪ್ಪ- ಅಮ್ಮನ ಕನಸಿಗೆ ಈಗ ನಾನು, ನನ್ನ ತಮ್ಮ ಸೇರಿಕೊಳ್ತಿರೋ ಹಾಗೇ, ಅಯ್ಯರ್ ಮಾಮಾ-ಮಾಮಿಗಳು ತುಂಬಿಕೊಳ್ತಾ ಎತ್ತರೆತ್ತರಕ್ಕೆ 'ಲೋಕಲ್' ಜನರ ಕೈ ಕಾಲು, ಕಣ್ಣು ಮೀರಿ ಬೆಳೆಯುತ್ತಿರೋ ರಿಯಲ್ ಎಸ್ಟೇಟ್ ರೇಟು... ಸ್ವಲ್ಪ ಹೆಚ್ಚಾದ್ರೂ ಹೇಗೋ ಒಂದು ಪುಟ್ಟ ಮನೆಯಾಗಿಬಿಟ್ರೆ ನಮ್ಮದೇ ಊರಿನಲ್ಲಿ ರೂಮ್ ಸಿಗದೇ ಕವಿಯೋ ಅನಾಥಪ್ರಜ್ನೆಗೆ ಸ್ವಲ್ಪ ಮುಕ್ತಿ ಅಂದುಕೊಳ್ಳೋವಾಗ್ಲೇ ಅಯ್ಯರ್ ಕ್ಯಾಪಿಟಲಿಸ್ಮ್ನ ಮಿನಿ ರೂಪ ನಮ್ಮ ಬೆಂಗಳೂರು 'ಬಯಿಂಗ್ ಪವರ್' ಅನ್ನೋ ಕಸಿವಿಸಿಯೂ ಸೇರುತ್ತಾ..., ಯಾವಾಗ್ಲೋ ವರ್ಷಕ್ಕೆ ಎರಡು ಸಲ ಹೋಗಿ ನಾಕು ದಿನ ಇದ್ದುಬರೋಕೆ ಅಲ್ಲೇ ಬದುಕುವವರ ಸ್ವಂತ ಜಾಗದ ಕನಸುಗಳಿಗೆ ನಮ್ಮದೂ ಪೆಟ್ಟು ಹಾಕ್ಬೇಕಾ ಅನ್ನಿಸುತ್ತಾ...
ಅಜ್ಜ ಹುಟ್ಟಿ ಬೆಳೆದ ದಕ್ಷಿಣ ಕನ್ನಡ, ಅಪ್ಪ ಬೆಳೆದ ಶೃಂಗೇರಿ, ಅಮ್ಮನ ಮೈಸೂರು, ನಮ್ಮ ಬೆಂಗಳೂರುಗಳಲ್ಲಿ ನಮ್ಮೂರು ಅನ್ನೋ ಹಕ್ಕು ಎಲ್ಲಿಗೆ ಸಲ್ಲುತ್ತೆ ಅನ್ನೋ ಪ್ರಶ್ನೆಗೆ ಎಲ್ಲವೂ, ಯಾವ್ದೂ ಅಲ್ಲ, ಅಥ್ವಾ ಇದು ಹೆಚ್ಚು ಇದು ಕಡಿಮೆ ಅಂತ ಏನೇನೋ ಉತ್ತರಗಳಂತೆ ಹೊಳೆದು ಮಾಯವಾಗುತ್ತಾ... ನೆಲೆ, ಮೂಲ ಎಲ್ಲದರ ಬಗ್ಗೆ ಪ್ರಶ್ನೆಗಳು ಎರ್ರಾಬಿರ್ರಿ ತಲೆಯಲ್ಲಿ ತುಂಬಿಕೊಳ್ತಾ...
ಮತ್ತೆ ಮೆಲುಕಿಗೆ ಅನಂತ ಹೊಳ್ಳರ ಮಕ್ಕಳು ಹತ್ತಿಸಿ ಕಳಿಸಿದ ಆಟೋ, ಅಪ್ಪನ ಬಾಲ್ಯಸ್ನೇಹಿತರ ಮನೆಯ ಆತಿಥ್ಯ, ಕಚೇರಿಗೆ ನೈಭಿಗೆ ಬಂದ ತಮ್ಮ ಕಟ್ಟಿಕೊಂಡು ಬಂದ ತಾತನ ನೆನಪುಬುತ್ತಿ(ಅಲ್ಲಿಗೆ ಮೃದಂಗವನ್ನ ಪರಿಚಯ್ಸಿದೋರು ತಾತನೇ ಅಂತೆ! ಇಂದು ಅಲ್ಲಿ ಸಂಗೀತವನ್ನು ಉಳಿಸಿ ಬೆಳೆಸ್ತಿರೋ ಹಿರಿಯರಿಗೆ ಅಂದು ತಾತ ಹೀರೋ; ಗುಂಪು ಕಟ್ಟಿ ಕಚೇರಿ ನಡೆಸ್ತಿದ್ದ ಅಪ್ಪ, ಅಪ್ಪನ ಗೆಳೆಯರು ಸ್ಫೂರ್ತಿ!)...ಬೆಟ್ಟದ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಓ ಪುಂಡ್ರೀಕ ಭಟ್ರು ಚೆನ್ನಾಗಿ ಗೊತ್ತು ಅಂತ ಅಂದಾಗ... ಎಲ್ಲೋ ಇನ್ನೂ ಅಲ್ಲೇ ಅಂಟಿರುವ ನಂಟು ಹೊಸದಾಗಿ ತೆರೆದುಕೊಳ್ಳುತ್ತಾ...
ಏನಿರಲಿ ಇಲ್ಲದಿರಲಿ ಇಲ್ಲಿಯವರೆಗೆ ಹಾದಿ ನೆರಳಾಗಿ ಕಾಯ್ದಿರುವ ಶಾರದೆ ಹಾಗೇ ಇರ್ತಾಳನ್ನೋ ನಂಬಿಕೆಯಲ್ಲಿ ನೆಲೆ ಕಂಡು ಐರಾವತದಲ್ಲಿ(ಮಳೆ ಬಂದ್ರೆ ಸೋರತ್ತೆ!!) ಕೂತಾಗ ರವಿಚಂದ್ರನ್ ಸಿನೆಮಾ ಟಿವಿಯಲ್ಲಿ ಪ್ರತ್ಯಕ್ಷವಾಗಿ, ಶಾರದೆಗೆ ಮುಗಿ ಬೀಳೋ ಜನ ಹೆಣ್ಣನ್ನ ಸ್ಟಿರಿಯೋಟೈಪ್ ಶರಣಾಗತಿಗಳಲ್ಲೇ ಕನಸುವ ಪರಿಗೆ ಇನ್ನಷ್ಟು ಕನ್ಫ್ಯೂಸ್ ಆಗಿ, ನಮ್ಮ ಸಂಸ್ಕೃತಿಯ ವಿಚಿತ್ರ ವೈರುಧ್ಯ-ವೈವಿಧ್ಯಗಳಿಗೆ ಮತ್ತೆ ದಿಗ್ಭ್ರಮೆ!
ಅಂದ್ಹಾಗೆ ದೇವಸ್ಥಾನದ ಸ್ನಾನ ಘಟ್ಟದ ಪಕ್ಕದಲ್ಲಿ ಮರಳ ಸೇತುವೆ, ಬಿದಿರು ಸೇತುವೆ ಹಾಗೂ ಈಗಿನ ಸಿಮೆಂಟು 'ವಿದ್ಯಾತೀರ್ಥ ಸೇತುಃ'ಗಳೆಲ್ಲಕ್ಕೂ ಸಾಕ್ಷಿಯಾಗಿ ನಿಂತಿದ್ದ ಅರಳೀಮರ ಈ ಸಲದ ಮಿಸ್ಸಿಂಗ್ ಲಿಸ್ಟಿಗೆ ಇನ್ನೊಂದು ಹೊಸ ಸೇರ್ಪಡೆ!
Labels:
ಹರಟೆ,
ಹೀಗೇ ಸುಮ್ಮ್ನೆ
Subscribe to:
Post Comments (Atom)
24 comments:
ಶೃಂಗೆೇರಿಯ ಬೀದಿಗಳು, ಮಠ... ಎಲ್ಲಾ ನೆನಪಾಗಿ.. ಸ್ವಲ್ಪ ವ್ಯಥೆಯಾಯ್ತು. ಎಲ್ಲವೂ ಯಾವಾಗಲೂ ಬದಲಾಗುತ್ತಲೇ ಇರುತ್ತವೆ... ನೆನಪುಗಳಷ್ಟೇ ಉಳಿಯುತ್ತವೆ.
ಪಳಗಿರುವ ಪ್ರತಿ ಜಾಗ ಮತ್ತು ವಸ್ತುವಿನಲ್ಲಿ ನೆನಪುಗಳು ತುಂಬಿರುತ್ತವೆ. ಆದರೆ ಆ ಸೆಳೆತವು ಕಲ್ಪನೆಗಳಿಗೆ ಮತ್ತು ಭಾವನೆಗಳಿಗೆ ಸೀಮಿತ. ಒಂದು ದೃಷ್ಟಿಯಲ್ಲಿ ನೋಡಿದ್ರೆ ಜಾಗಗಳು ಮತ್ತು ಅದೊರೊಂದಿಗೆ ಇರುವ ಸಂಬಂದಗಳು ದೋಸೆ ಕಲ್ಲಿನ ಹಾಗೆ.
ಅದನ್ನ ಕಾಯಿಸಿ, ಯಾವ ರೀತಿಯ ದೋಸೆ ಮಾಡಿ , ಯಾವ ತರಹ ಆಸ್ವಾದಿಸುತ್ತೇವೆ ಅನ್ನುವುದು ಪ್ರತಿ ಕ್ಷಣವೂ ನಮ್ಮ ಕೈಯಲ್ಲಿದೆ. ಮೊನ್ನೆ ಹಳ್ಳಿಯಲ್ಲಿ ತಿಂದ ದೋಸೆಯ ರುಚಿಯನ್ನ ನೆನೆಯುತ್ತ ಕುಳಿತರೆ ಇಂದಿನ ಬೆಂಗಳೂರಿನ ಚಿತ್ರಾನ್ನ ಹಳಸಿ ಹೋಗುವ ಸಾಧ್ಯತೆ ಇದೆ. ನಾನೇನು ಆ ನೆನುಪುಗಳನ್ನು ಮೀರಿದವನಲ್ಲ, ಆದ್ರೆ ಒಂದೊಂದು ಸಲ ಇದೆಲ್ಲ ನಾವು ನಮಗಾಗಿ ಸೃಷ್ಟಿಸಿರುವ ಭಾವನಾ ಕ್ರೀಡೆಗಳು ಅಂತ ಅನಿಸುತ್ತೆ.
Wah !
Eshtu dina aagithu ninna baravanige odi...
Kaleda varsha nimmagala dayadindha nanagu Sringeri'ya darshana bhaagya labhya....one of my most memorable trips. Matteh adanna nenapisi kottidakke thanks !
ಬರವಣಿಗೆಯ ಶೈಲಿ ಅಧ್ಬುತ ವಾಗಿ ಇದೆ....ನಾನು ಶ್ರಿಂಗೇರಿಯವನೆ ಅದ್ದರಿಂದ ನೆನಪುಗಳು ಒತ್ತರಿಸಿಕೊಂಡು ಬಂದುಬಿಟ್ವು....ಲೇಖನ ಮನಮುಟ್ಟುವಂತಿದೆ
ನಾಗರಾಜ್ ಮೌಳಿ
aparoopakke baredru ishta aaguva haage baritheeri neevu :)
@L'Étranger
ಹ್ಮ್ಮ್...:)
@ವಿವೇಕ್
ಚಿತ್ರಾನ್ನ ಹಳಸಿದ್ರೂ ಫ್ರೈಡ್ ರೈಸ್ ಮಾಡಿಕೊಂಡು ತಿನ್ನೋ ಅಷ್ಟು ಉತ್ಸಾಹ ಇದ್ರೆ ಆಯ್ತಲ್ಲ್ವಾ?;) in fact ದೋಸೆಯ ರುಚಿ ನೆನಪು ಮಾಡಿಕೊಳ್ದೇ ಸಿಕ್ಕ ಚಿತ್ರಾನ್ನಕ್ಕೇ ತೃಪ್ತಿಯಾಗ್ಬಿಟ್ರೆ ನಮ್ಮ ರುಚಿಯ ಜೊತೆ ಫ್ರೈಡ್ ರೈಸ್ ಮಾಡೋ ಉತ್ಸಾಹವೂ ಕಳೆದುಹೋಗಬಹುದಲ್ವಾ?:)
seriously speaking,ಎರಡು ಪಾಯಿಂಟ್ಸ್ - ಒಂದು, ಭಾವತೀವ್ರತೆ ಈ ಬರಹದ ಸ್ಫೂರ್ತಿ ಅನ್ನೋದು ನಿಜ, ಆದ್ರೆ ಆ ಹಳಹಳಿಕೆಗೆ ಕಳೆದ ನೆನಪಿನ 'ಭಾವನಾ ಕ್ರೀಡೆ'ಯ(ಪೂರ್ತಿ ಹಳಹಳಿಕೆಯೇ ಅಲ್ಲ, ಹಾಗನ್ನಿಸಿದ್ರೆ ಅದು ನನ್ನ ಬರಹದ/ಅಭಿವ್ಯಕ್ತಿಯ ಲಿಮಿಟೇಶನ್) ಜೊತೆ ಐಡೆಂಟಿಟಿ, ಹೋಮೋಜನೈಸೇಶನ್...ಇವೆಲ್ಲವೂ ಸ್ವಲ್ಪ ಮಟ್ಟಿಗಾದ್ರೂ ಕಾಡ್ತಿರೋದು ಕಾರಣ ಅನ್ನೋದು ನಿಜ. ಅವುಗಳ ಬಗ್ಗೆ ನಾನು ಬಹಳ ತೀವ್ರವಾಗಿ ಚಿಂತಿಸಿದ್ದೀನಿ ಅಂತ ಹೇಳ್ತಿಲ್ಲ, ಆದ್ರೆ ಆ ಕಡೆ ನನ್ನ ಯೋಚನೆ ಹರಿದಿದೆ ಅನ್ನೋದಂತೂ ಖಂಡಿತ:)
ಎರಡನೇ ಪಾಯಿಂಟ್ - ದೋಸೆ ಕಲ್ಲು-ಚಿತ್ರಾನ್ನದ ಉಪಮೆಯಂತೆ ಭಾವಲಹರಿಯನ್ನೂ ನಾವು ಹೇಗೆ ನೋಡ್ತೀವಿ ಅನ್ನೋದರ ಮೇಲೆ ಹೋಗತ್ತೆ ಅನ್ಸುತ್ತೆ...ಅಂದ್ರೆ ವೈಯುಕ್ತಿಕವಾಗಿ, ನನ್ನನ್ನ ಒಂದು ವಿಷ್ಯ ಚಿಂತನೆಗೆ ಅಥ್ವಾ ಯಾವುದೇ ರೀತಿಯ ಕಾರ್ಯಶೀಲತೆಗೆ ಹಚ್ಚಬೇಕಾದ್ರೆ ಅದು ಮೊದಲು ಭಾವಪ್ರಪಂಚದಲ್ಲಿ ನನ್ನನ್ನ ತಟ್ಟಬೇಕು,or at least thats the easier route:)
ಅದಕ್ಕೇ the here and now ಜೊತೆಗೆ ನೆನ್ನೆಯ ನೆನಪು, ನಾಳೆಯ ಕನಸುಗಳಿಗೂ ಸ್ವಲ್ಪ ಜಾಗ ಕೊಡಬೇಕೇನೋ ಅನ್ನ್ಸುತ್ತೆ, ಯಾವಾಗ್ಲೂ 'ಮೀರೋ' ಪ್ರಯತ್ನ ಮಾಡದೇ:)
actualy I am not sure I have understood ur response in the sense u meant!
ಮತ್ತೆ ಇಲ್ಲಿ ಬಂದು ಓದಿದ್ದಕ್ಕೆ, ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್:)n nice to see ur blogs revived!
@ಹೇಮಕ್ಕ, ನಾಗರಾಜ್ ಧನ್ಯವಾದಗಳು
@ಸುಧೇಶ್, ಅಪರೂಪಕ್ಕೆ ಬರೆದ್ರೂ ಮರೀದೇ ಬಂದು ಓದಿದ್ದಕ್ಕೆ ಥ್ಯಾಂಕ್ಸ್!:ಪ್
ಮಿಸ್ಸಿಂಗ್ ಲಿಸ್ಟ್ ಬೆಳೆಯದಿರಲಿ ಅಂದುಕೊಳ್ಳೋಣ! ೊಳ್ಳೆಯ ಬರಹ. ಅಭಿನಂದನೆಗಳು
ಶೃಂಗೇರಿಯ ಬಗ್ಗೆ ವಿವರಣೆ ಸೊಗಸಾಗಿದೆ. ನಾನು ಮತ್ತು ನನ್ನ ಪತ್ನಿ, ವಿದ್ಯಾಸೇತುವಿನ ಮೇಲೆ ಹಾದು ಹೋಗಿ ಆನಂದಿಸಿದ್ದೆವು.
ತುಂಗೆಯ ತಿಳಿನೀರಿನಲ್ಲಿ, ತೇಲುತ್ತಾ ಆನಂದಿಸುತ್ತಿದ್ದ ಮೀನುಗಳು ಬಹಳ ಆನಂದವನ್ನು ನಮಗೆ ದೊರಕಿಸಿದವು !
೧) ಭಾವ ತೀವ್ರತೆ ಹಾಗು ಭಾವನ ಸಂತುಲನ ಎರಡನ್ನು ಆಶಿಸುವ ಮನದ ದ್ವಂದ್ವ.
೨) ಹಳೆಯದನ್ನು ನೆನೆಯುವ moodನಲ್ಲಿ settle ಆಗಿಬಿಟ್ರೆ, ಈಗ ಎದುರು ಇರೋದರ ಬೆಲೆ ಮರೆತು ಅದನ್ನು ಹಳೆದಾದ್ಮೇಲೆ ನೆನಸಿಕೊಳ್ಳೋ ಆತಂಕ.
ಇದನ್ನೆಲ್ಲಾ ಆಲೋಚನೆ ಮಾಡ್ತಾ ಕಾಮೆಂಟ್ ಮಾಡಿದ್ದೆ.
ಸಂಕ್ಷಿಪ್ತವಾಗಿ ಹೇಳಬೇಕಂದ್ರೆ ನಿಮ್ಮ blog titleಗೆ ಮ್ಯಾಚ್ ಆಗತ್ತೆ. "ಇರುವುದೆಲ್ಲವ ಬಿಟ್ಟು ..." :)
ಆ ಶೃಂಗೇರಿಯ ಮೋಹನ ಮುರಳಿ ನೆನಪಿನಲ್ಲಿ ಇದ್ದು ನಿಜ ಜೀವನದಲ್ಲಿ ಎಳೆಯುತ್ತಾ ಇದೆಯೇ ಅಂತ.
ಲೇಖನ ಚೆನ್ನಾಗಿದೆ, ನಾನು (ಹೀಗೆ ಸುಮ್ಮನೆ) ಅದರ ಹಿಂದಿರುವ ಭಾವನೆ ಮತ್ತು ಅದರ extreme ಪರಿಣಾಮದ ಬಗ್ಗೆ loud thinking ಮಾಡ್ತಿದ್ದೆ ಅಸ್ಟೇ. ಜಾಸ್ತಿ ಸೀರಿಯಸ್ ಆಗಿ ತಗೊಳ್ಬೇಡಿ.
@Dr Satyanarayana
missing list beLeedE irOdu saadhyana?:)
@Laxmivenkatesh
thanks:)
@vivek
" ಜಾಸ್ತಿ ಸೀರಿಯಸ್ ಆಗಿ ತಗೊಳ್ಬೇಡಿ" - :|
" ನಿಜ ಜೀವನದಲ್ಲಿ ..." - !!
clarification, just in case it sounded otherwise:
ನಾನು ನನ್ನ ಮನದಲ್ಲಿರುವ ದ್ವಂದ್ವವನ್ನು loud thinking ಮಾಡ್ತಿದ್ದೆ ಅಸ್ಟೇ, ಅದಕ್ಕೆ ನನ್ನ ಕಾಮೆಂಟ್ ಜಾಸ್ತಿ ಸೀರಿಯಸ್ ಆಗಿ ತೊಗೊಲ್ಬೇಡಿ ಅಂತ ಹೇಳಿದ್ದು, ನಿಮ್ಮ ಬರವಣಿಗೆಯ ಸ್ಪೂರ್ತಿಯನಲ್ಲ.
nammatha middle generationnavrige eshtondella missing alva lifenalli... :(
@vivek
ಅರ್ಥ ಆಯ್ತು, ಅದಕ್ಕೇ :| ಹಾಕಿದ್ದು:) (ನನ್ನ ಬರವಣಿಗೆಯ ಸ್ಫೂರ್ತಿಯನ್ನ ಸೀರಿಯಸ್ ಆಗಿ ತೊಗೋಬೇಡ ಅಂದ್ರಿ ಅನ್ಕೊಂಡಿದ್ರೆ ಜಗಳಕ್ಕೆ ನಿಲ್ಲ್ತಿದ್ದೆ:))
@vi
ಮಿಡ್ಲ್ ಜೆನೆರೇಶನ್ನು....ಹ್ಮ್...ಹುಟ್ಟಿಬೆಳೆದ ಬೆಂಗಳೂರಿನ ರೂಪಾಂತರಗಳನ್ನ ನೋಡ್ತಿದ್ರೆ ಇನ್ನೂ ಕನ್ಫೀಸನ್ ಆಗ್ಬಿಡತ್ತೆ!!
Hmm.
Nice writing. After a long Gap u r writing. I used to visit ur page often to find something.U r the bread and butter for my brain (im serious . As a person not staying in India, who miss daily conversations of life and whose connections are only epapers, blogs. these kind of writings alway bring some strength.
I think we become nostalgic about what we left and come. I think about my native, those summer holidays,its 46 degrees temp which was felt like a nice cool full moon day.
But i dont know whether i can go back there .
a very nice deep writing.
pls do write more
Kulkarni
ಬರವಣಿಗೆ ತುಂಬಾ ಸೊಗಸಾಗಿದೆ.. ಸದಾ ಹೀಗೆ ಇರಲಿ...
ಚೆನ್ನಾಗಿದೆ, ನಮ್ಮೂರ ಬಗ್ಗೆ ಬರೆದದ್ದು...ಮಯೂರ/ಸುಧಾ ಸಂಚಿಕೆಗಳು, ಬಿಳೀ ಗುಲಾಬಿ ಹೂಗಳು, ಹಿತ್ತಿಲು, ಉಪ್ಪಿನ ಕಾಯಿ, ಜೇನು, ಹೊಳೆದಂಡೆಯ್ ಆಟ... ನಮ್ಮ ವೇಗಕ್ಕೆ ತಕ್ಕಂತೆ ಓಡುತಿದ್ದ ಸಮಯ... ಹಳತು ಅಂದಾಗ ನೆನಸಿಕೊಂಡು ಖುಷಿ ಪಡಬೇಕೋ ಅಥವಾ ಅದು ಈಗ ಮೊದಲಿನಂತಿಲ್ಲವಲ್ಲ ಅಂತಾ ಬೇಜಾರು ಪಟ್ಕೋಬೇಕೋ (ನಾವ್ಮಾತ್ರ ಬದಲಾಗಿ, ನಾವ್ ನೋಡಿದ್ದು, ಅನುಭವಿಸಿದ್ದು ಬದಲಾಗದೇ ಇರಲಿ ಅನ್ನೋದು ಸ್ವಾರ್ಥ ತಾನೇ?) ಗೊತ್ತಾಗದ ಇಬ್ಬಂದಿ. ಬರೆದು ಬಹಳ ದಿನಗಳಾದರೂ ಅದೇ ಶ್ರೀ-ಸ್ಪರ್ಶ ಇದೆ!
ಮಲೆನಾಡು ಪ್ರದೇಶ - ಶೃ೦ಗೇರಿಯ ಉತ್ತಮ ಚಿತ್ರಣ.
ಶುಭಾಶಯಗಳು
ಅನ೦ತ್
ಭಾವನೆಗಳನ್ನು ಚೆನ್ನಾಗಿ ಮೂಡಿಸಿದ್ದಿರಿ..ಬರೆದ ಶೈಲಿ ಹಿಡಿಸಿತು..ಚೆನ್ನಾಗಿದೆ.
ನಾಸ್ಟಾಲ್ಜಿಯಾಗೆ ಜೈ. :-)
ಒಳ್ಳೆ ಬರಹ...ಹೌದು, ಈಗ ನೋಡುವ ಊರಿಗೂ, ಹಳೆಯ ಊರಿಗೂ ಸಾಕಷ್ಟು ಬದಲಾವಣೆಗಳು...ಆದ್ರೂ ನಿತ್ಯವೂ ಬದಲಾಗುವ ಬೆಂಗಳೂರಿನಂತಲ್ಲ ನಮ್ಮೂರು ಅನ್ನೋದೆ ಸಮಾಧಾನದ ಸಂಗತಿ..ಅಪರೂಪಕ್ಕೆ ಭೇಟಿ ನೀಡಿ ಹಳೆಯದನ್ನೆಲ್ಲ ನೆನಪಿಸಿಕೊಳ್ಳುವ ಮಜ ಹೇಳತೀರದು!
sooperb narrationu :)
@ಮಂಜು, ಮೌನಗೀತೆ, ಶಿವಕುಮಾರ, ಅನಂತರಾಜ್, ಮನಮುಕ್ತಾ, ವಿನಾಯಕ, ವೇಣು, ಥ್ಯಾಂಕ್ಯೂ:)
@punchline ಹೂ, ಜೈ:))
ಹಳೆಯ ಸವಿನೆನಪುಗಳು!
ಸಂಗತಿ - ಅಲ್ಲ; ಎಂದೂ ಮಾಸದೇ, ಕೈಕೊಡದೇ ಜೊತೆ ಬರುವ ಜೀವನ ಸಂಗಾತಿಗಳು!
ಕಳೆದುಕೊಂಡದ್ದನ್ನು ಮರೆಯಲಾಗದು.
"ದೇವಸ್ಥಾನದ ಸ್ನಾನ ಘಟ್ಟದ ಪಕ್ಕದಲ್ಲಿ ಮರಳ ಸೇತುವೆ, ಬಿದಿರು ಸೇತುವೆ, ವಿದ್ಯಾತೀರ್ಥ ಸೇತು.... "
ಏನೆಲ್ಲ ನೆನಪಿಸಿದ್ದೀರ! ತುಂಬಾ ಚನ್ನಾಗಿ ಬರೆದಿದ್ದೀರ! ಅಭಿನಂದನೆಗಳು!
ಒಂದು ಮಾತು ಕೇಳಬಹುದೇ?
ಬೆಟ್ಟದ ಮಲ್ಲಿಕಾರ್ಜುನ? ಶೃಂಗೇರಿಯ ಹತ್ತಿರ? ಎಲ್ಲಿ ಅದು??
thank u:) mallikarjuna beTTa (its rather a guDDa, but called 'beTTa') sringeriyallE ide, 'malahAnikEshwara' mukhya dEvaru... maThadinda naDedukonDu hOdre 10 nimishada haadi
Post a Comment