Sunday, April 25, 2010

ಶೃಂಗೇರಿಯಲ್ಲಿ ನಾಕು ಹೆಜ್ಜೆ...


ಶೃಂಗೇರಿಗೆ ಒಂದು ದಿನದ ಪುಟ್ಟ ಟ್ರಿಪ್ ಮುಗಿಸಿ ಬರೋವಾಗ ಹೊರಗೂ ಒಳಗೂ ಮಳೆ...
ಬಾಲ್ಯದ ಬೇಸಿಗೆ ರಜಗಳಲ್ಲಿ ವಾರಗಟ್ಟಲೆ ಹೋಗ್ತಿದ್ದ ದಿನಗಳನ್ನ ನೆನಪಿಸಿಕೊಂಡಾಗ ನಿಜವಾ ಅನ್ನಿಸೋ ಅಷ್ಟು ಬದಲಾಗಿದೆ, ಎಲ್ಲ!

ಬೆಂಗಳೂರಂದ್ರೆ ಬೆರಗುಗಣ್ಣಾಗೋ ಪುಟ್ಟ ಊರು,ಜಗುಲಿಯಲ್ಲಿ ಕೂತು ಓದುತ್ತಿದ್ದ ಆ ಹಳೆಯ ಮಯೂರ/ಸುಧಾ ಸಂಚಿಕೆಗಳು, ಮನೆಯ ಹಿತ್ತಲಿನ 'ಸಣ್ಣ್ ಹೊಳೆ'(ಹರಿವು ಕಮ್ಮಿಯಿರೋ ಈಗ ಪಾರ್ಕಿಂಗ್ ಲಾಟ್ ಆಗಿರೋ ಹೊಳೆ ದಂಡೆ)ಯಲ್ಲಿ ಆಟ... ಅಲ್ಲಿನ ಮೀನುಗಳೂ ಪುಟ್ಟ ಪುಟ್ಟವು!
ಹಿತ್ತಲ ಬಿಳಿ ಗುಲಾಬಿ ಮೊಗ್ಗುಗಳ 'ಹೇರ್ ಬ್ಯಾಂಡ್'(ಜೊತೆಗೆ ಅದು ಪ್ರತಿಷ್ಠಾಪಿತವಾಗ್ತಿದ್ದ ಆ ಎರಡು ಜಡೆಗಳು!)...ಅಬ್ಬಲಿಗೆ?(ನನ್ನ್ ಪ್ರಕಾರ ಕನಕಾಂಬರದ ದೊಡ್ಡಕ್ಕ), ಪಿಂಕ್ ಸ್ಫಟಿಕ...
ಕೆಂಪಕ್ಕಿ ಅನ್ನದ ಜೊತೆ ಘಮ್ಮನ್ನೋ ಮಿಡಿಮಾವಿನಕಾಯಿ ಉಪ್ಪಿನಕಾಯಿ(ಬಾಟಲ್ ತುಂಬಿ ಬೆಂಗಳೂರಿಗೂ ಬರುತ್ತಿತ್ತು!)...ಸಂಜೆಯ ದೇವಸ್ಥಾನದ ವಿಜಿಟ್, ಅತ್ತೆ ಮಾಡ್ತಿದ್ದ ಚಕ್ಕುಲಿ, ರವೆ ಉಂಡೆ, ತಂಬುಳಿ, ಚಟ್ನಿ...ಮಠದ ಊಟದ 'ಮಣಿ ಮಣಿ ಪಾಯ್ಸ'
ಪ್ರೀತಿಯ ತಾತನ ನಿತ್ಯ ತುಂಗಾ ಸ್ನಾನ, ಪೂಜೆ, ಹಲಸಿನ ಹಣ್ಣು, ಕಾಫಿ ಪುಡಿ ಮಷೀನು, ಸೊಸೆ-ಮೊಮ್ಮಕ್ಕಳಿಗೆ ಮಾತ್ರ ಮಾಯವಾಗ್ತಿದ್ದ 'ದೂರ್ವಾಸ ಕೋಪ'!:)....
ಕಳೆದ ಆ ಸರಳ ಸುಂದರ ಪುಟ್ಟ ಪ್ರಶಾಂತ ಪ್ರಪಂಚಕ್ಕೆ ನೆನಪಿನ ಸಿಹಿಯ ಕೊಡುಗೆ ಎಷ್ಟಿದೆಯೋ ಗೊತ್ತಿಲ್ಲ!:)

ಗಂಟೆಗಟ್ಟಲೇ ನಿಧಾನಕ್ಕೆ ಕೂತು ಶಾರದೆಯ ಜೊತೆ ಹೊಡೆಯುತ್ತಿದ್ದ ಲೋಕಾಭಿರಾಮದ ಹರಟೆ ಈಗ 'ಮುಂದ್ ಹೋಗಿ' ಕೂಗುಗಳಿಗೆ ಬಲಿ!
ಮಾವಿನ ಮಿಡಿಗಳೆಲ್ಲ ಒಂದಲ್ಲದೇ ಹತ್ತು ಹಲವಾಗಿ ತುಂಬಿರೋ ಸಂಡಿಗೆ-ಹಪ್ಪಳ-ಉಪ್ಪಿನಕಾಯಿ ಅಂಗಡಿಗಳ ಡಬ್ಬಗಳಲ್ಲಿ!
ಬೆಟ್ಟಕ್ಕೆ ಹೋಗೋ ದಾರಿಯಲ್ಲಿ ಅಜ್ಜಿಯ ತಮ್ಮನ ಮನೆ, ಸರಸ್ವತಮ್ಮ ನೆನಪಾಗಿ ಸಂದ ಮೇಲೀಗ ಬರೀ ನೆನಪು...
ಅನಂತ ಹೊಳ್ಳರ ಕ್ಯಾಂಟೀನಿನಲ್ಲಿ ಇನ್ನು ಅನಂತ ಹೊಳ್ಳರಿಲ್ಲ. ಇಡ್ಲಿ-ವಡೆ-ದೋಸೆ-ಬಜ್ಜಿ ಟಿಫನ್ ಸೆಂಟರುಗಳಲ್ಲಿ ಈಗ ಸಂಜೆ ಮ್ಯಾಗಿ ಲಭ್ಯ! ಕರಿಬೇವಿನ ಒಗ್ಗರಣೆ ಹಾಕಿದ ಗೋಬಿ ಮಂಚೂರಿಯನ್ನೂ ಶೃಂಗೇರಿಗೆ ಬಂದಾಯ್ತು!!

ತಾತ ಇದ್ದ ಮೂರು ಮನೆಗಳಲ್ಲಿ ಒಂದು ಯಾತ್ರಿ ನಿವಾಸ್ ಗೆ ದಾರಿ ಬಿಟ್ಟು ವರ್ಷಗಳಾಯ್ತು. (ಆದ್ರೂ ಮಠದ ವಸತಿಗೃಹಗಳಲ್ಲಿ ಈಗ ರಜಾ ದಿನಗಳೆಲ್ಲ 'ಹೌಸ್‌ಫುಲ್'! ಒಂದು ದಿನಕ್ಕೆ ಸಿಗಬಹುದು, ಎರಡು ದಿನ ಕಷ್ಟ, ವಾರ ವಾರ ಇರೋದು ಇನ್ನು ಕನಸು!)
ಎರಡನೆಯದ್ದು ಈಗ ಅಂಗಡಿಸಾಲಿಗೆ ಸೇರಾಯ್ತು. 'ತಾತನ ಮನೆ' ಅನ್ನೋ ನೆನಪಿಗೆ ಉಳಿದಿರೋ ಕೊನೆಯ ಲಿಂಕ್ ಮೂರನೆಯದ್ದು ಯಾವತ್ತು ಏನಾಗುತ್ತೆ ಅಂತ ಯೋಚಿಸುತ್ತಾ, ನಮ್ಮ ನಾಸ್ಟಾಲ್ಜಿಯಾ ಹಳಹಳಿಕೆಗಳಿಗೆ ಊರು ನಿಂತಲ್ಲೇ ನಿಲ್ಲೋಕಾಗುತ್ತಾ ಅಂತ ಸಮಾಧಾನ ಮಾಡಿಕೊಳ್ತಾ, ಶೃಂಗೇರಿಯಲ್ಲೊಂದು ಪುಟ್ಟ ಮನೆ ಅನ್ನೋ ಅಪ್ಪ- ಅಮ್ಮನ ಕನಸಿಗೆ ಈಗ ನಾನು, ನನ್ನ ತಮ್ಮ ಸೇರಿಕೊಳ್ತಿರೋ ಹಾಗೇ, ಅಯ್ಯರ್ ಮಾಮಾ-ಮಾಮಿಗಳು ತುಂಬಿಕೊಳ್ತಾ ಎತ್ತರೆತ್ತರಕ್ಕೆ 'ಲೋಕಲ್' ಜನರ ಕೈ ಕಾಲು, ಕಣ್ಣು ಮೀರಿ ಬೆಳೆಯುತ್ತಿರೋ ರಿಯಲ್ ಎಸ್ಟೇಟ್ ರೇಟು... ಸ್ವಲ್ಪ ಹೆಚ್ಚಾದ್ರೂ ಹೇಗೋ ಒಂದು ಪುಟ್ಟ ಮನೆಯಾಗಿಬಿಟ್ರೆ ನಮ್ಮದೇ ಊರಿನಲ್ಲಿ ರೂಮ್ ಸಿಗದೇ ಕವಿಯೋ ಅನಾಥಪ್ರಜ್ನೆಗೆ ಸ್ವಲ್ಪ ಮುಕ್ತಿ ಅಂದುಕೊಳ್ಳೋವಾಗ್ಲೇ ಅಯ್ಯರ್ ಕ್ಯಾಪಿಟಲಿಸ್ಮ್‌ನ ಮಿನಿ ರೂಪ ನಮ್ಮ ಬೆಂಗಳೂರು 'ಬಯಿಂಗ್ ಪವರ್' ಅನ್ನೋ ಕಸಿವಿಸಿಯೂ ಸೇರುತ್ತಾ..., ಯಾವಾಗ್ಲೋ ವರ್ಷಕ್ಕೆ ಎರಡು ಸಲ ಹೋಗಿ ನಾಕು ದಿನ ಇದ್ದುಬರೋಕೆ ಅಲ್ಲೇ ಬದುಕುವವರ ಸ್ವಂತ ಜಾಗದ ಕನಸುಗಳಿಗೆ ನಮ್ಮದೂ ಪೆಟ್ಟು ಹಾಕ್ಬೇಕಾ ಅನ್ನಿಸುತ್ತಾ...
ಅಜ್ಜ ಹುಟ್ಟಿ ಬೆಳೆದ ದಕ್ಷಿಣ ಕನ್ನಡ, ಅಪ್ಪ ಬೆಳೆದ ಶೃಂಗೇರಿ, ಅಮ್ಮನ ಮೈಸೂರು, ನಮ್ಮ ಬೆಂಗಳೂರುಗಳಲ್ಲಿ ನಮ್ಮೂರು ಅನ್ನೋ ಹಕ್ಕು ಎಲ್ಲಿಗೆ ಸಲ್ಲುತ್ತೆ ಅನ್ನೋ ಪ್ರಶ್ನೆಗೆ ಎಲ್ಲವೂ, ಯಾವ್ದೂ ಅಲ್ಲ, ಅಥ್ವಾ ಇದು ಹೆಚ್ಚು ಇದು ಕಡಿಮೆ ಅಂತ ಏನೇನೋ ಉತ್ತರಗಳಂತೆ ಹೊಳೆದು ಮಾಯವಾಗುತ್ತಾ... ನೆಲೆ, ಮೂಲ ಎಲ್ಲದರ ಬಗ್ಗೆ ಪ್ರಶ್ನೆಗಳು ಎರ್ರಾಬಿರ್ರಿ ತಲೆಯಲ್ಲಿ ತುಂಬಿಕೊಳ್ತಾ...

ಮತ್ತೆ ಮೆಲುಕಿಗೆ ಅನಂತ ಹೊಳ್ಳರ ಮಕ್ಕಳು ಹತ್ತಿಸಿ ಕಳಿಸಿದ ಆಟೋ, ಅಪ್ಪನ ಬಾಲ್ಯಸ್ನೇಹಿತರ ಮನೆಯ ಆತಿಥ್ಯ, ಕಚೇರಿಗೆ ನೈಭಿಗೆ ಬಂದ ತಮ್ಮ ಕಟ್ಟಿಕೊಂಡು ಬಂದ ತಾತನ ನೆನಪುಬುತ್ತಿ(ಅಲ್ಲಿಗೆ ಮೃದಂಗವನ್ನ ಪರಿಚಯ್ಸಿದೋರು ತಾತನೇ ಅಂತೆ! ಇಂದು ಅಲ್ಲಿ ಸಂಗೀತವನ್ನು ಉಳಿಸಿ ಬೆಳೆಸ್ತಿರೋ ಹಿರಿಯರಿಗೆ ಅಂದು ತಾತ ಹೀರೋ; ಗುಂಪು ಕಟ್ಟಿ ಕಚೇರಿ ನಡೆಸ್ತಿದ್ದ ಅಪ್ಪ, ಅಪ್ಪನ ಗೆಳೆಯರು ಸ್ಫೂರ್ತಿ!)...ಬೆಟ್ಟದ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಓ ಪುಂಡ್ರೀಕ ಭಟ್ರು ಚೆನ್ನಾಗಿ ಗೊತ್ತು ಅಂತ ಅಂದಾಗ... ಎಲ್ಲೋ ಇನ್ನೂ ಅಲ್ಲೇ ಅಂಟಿರುವ ನಂಟು ಹೊಸದಾಗಿ ತೆರೆದುಕೊಳ್ಳುತ್ತಾ...

ಏನಿರಲಿ ಇಲ್ಲದಿರಲಿ ಇಲ್ಲಿಯವರೆಗೆ ಹಾದಿ ನೆರಳಾಗಿ ಕಾಯ್ದಿರುವ ಶಾರದೆ ಹಾಗೇ ಇರ್ತಾಳನ್ನೋ ನಂಬಿಕೆಯಲ್ಲಿ ನೆಲೆ ಕಂಡು ಐರಾವತದಲ್ಲಿ(ಮಳೆ ಬಂದ್ರೆ ಸೋರತ್ತೆ!!) ಕೂತಾಗ ರವಿಚಂದ್ರನ್ ಸಿನೆಮಾ ಟಿವಿಯಲ್ಲಿ ಪ್ರತ್ಯಕ್ಷವಾಗಿ, ಶಾರದೆಗೆ ಮುಗಿ ಬೀಳೋ ಜನ ಹೆಣ್ಣನ್ನ ಸ್ಟಿರಿಯೋಟೈಪ್ ಶರಣಾಗತಿಗಳಲ್ಲೇ ಕನಸುವ ಪರಿಗೆ ಇನ್ನಷ್ಟು ಕನ್ಫ್ಯೂಸ್ ಆಗಿ, ನಮ್ಮ ಸಂಸ್ಕೃತಿಯ ವಿಚಿತ್ರ ವೈರುಧ್ಯ-ವೈವಿಧ್ಯಗಳಿಗೆ ಮತ್ತೆ ದಿಗ್ಭ್ರಮೆ!

ಅಂದ್‌ಹಾಗೆ ದೇವಸ್ಥಾನದ ಸ್ನಾನ ಘಟ್ಟದ ಪಕ್ಕದಲ್ಲಿ ಮರಳ ಸೇತುವೆ, ಬಿದಿರು ಸೇತುವೆ ಹಾಗೂ ಈಗಿನ ಸಿಮೆಂಟು 'ವಿದ್ಯಾತೀರ್ಥ ಸೇತುಃ'ಗಳೆಲ್ಲಕ್ಕೂ ಸಾಕ್ಷಿಯಾಗಿ ನಿಂತಿದ್ದ ಅರಳೀಮರ ಈ ಸಲದ ಮಿಸ್ಸಿಂಗ್ ಲಿಸ್ಟಿಗೆ ಇನ್ನೊಂದು ಹೊಸ ಸೇರ್ಪಡೆ!