Friday, March 16, 2007

ನಮ್ಮ ಯುಗಾದಿ

ಹಬ್ಬದ ಸಡಗರದ ಮಧ್ಯೆ ಯುಗಾದಿಗಾಗಿ ಕೆಲವು ಕ್ಷಣಗಳು...

ಯುಗಾದಿಯೊಂದಿಗೇ ಕನ್ನಡಿಗರ ಮನಸ್ಸಿಗೆ ಥಟ್ ಅಂತ ಬರೋ ಕವನ ವರಕವಿಯವರ evergreen ಹಾಡು...ಆಕಾಶವಾಣಿಯಿಂದ ಹಿಡಿದು sms ಶುಭಾಶಯಗಳವರೆಗೆ ಇವತ್ತು ಈ ಹಾಡಿನದ್ದೇ ರಾಜ್ಯಭಾರ!:)
ಹೊಸ ವರ್ಷದ ಹೊಸತನವನ್ನು ಎಲ್ಲೆಡೆ ನೋಡೋ ಈ ಕವಿತೆಯ ಕೆಲವು ಸಾಲುಗಳ ಬಗ್ಗೆ ಹಾಗೇ ಯೋಚಿಸುತ್ತಿದ್ದೆ...
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ...
ಎಲ್ಲದರಲ್ಲೂ ಏನೋ ಒಂದು ಹೊಸತನವನ್ನು ತರೋ ಯುಗಾದಿಯನ್ನ ನಮ್ಮ ಜೀವನದಲ್ಲಿ ಹೇಗೆ ತರೋದು ಅನ್ನೋ ಯೋಚನೆ ಬಂತು. ಬೇಂದ್ರೆಯವರು ಹೇಳೋ ಹಾಗೆ
"ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"
ಅನ್ನಿಸ್ತು! ಶಿಶಿರದಲ್ಲಿ ಮೈಕೊಡವಿ ವಸಂತದಲ್ಲಿ ಮತ್ತೆ ಹೊಸ ಚಿಗುರನ್ನುಡುವ ಪ್ರಕೃತಿಯ ಮೇಲೆ ಸ್ವಲ್ಪ ಅಸೂಯೆನೇ ಆಯ್ತು ಅನ್ನಬಹುದು!:)
ಹಾಗೇ ಕೆ ಎಸ್ ನ ಅವರ "ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ" ನೆನಪಾಯ್ತು...
ಸ್ಯಾಂಕಿ ಕೆರೆಯುದ್ದಕ್ಕೂ ಹಾರಿ ನಲಿಯುತ್ತಿದ್ದ ಹಕ್ಕಿಗಳನ್ನ ನೋಡ್ತಾ ನಡೀತಿದ್ದಾಗ ಗೆಳತಿ ಹೇಳಿದ್ದು...ಅವುಗಳಂತೆ ಆರಾಮಾಗಿ ಇರೋಕೆ ಆಗಿದ್ರೆ ಎಷ್ಟು ಚೆನ್ನಾಗಿರ್ತಿತ್ತಲ್ಲವೇನೆ ಅಂತ...

ಹಕ್ಕಿಯಂತೆ ಹಾರೋದು, ನೀರಲ್ಲಿ ಆಡ್ಕೊಂಡು ಇದ್ದುಬಿಡೋದು ಸಾಧ್ಯವಾಗದೇ ಇರಬಹುದು, ನಮ್ಮ ಗೂಡಿನಲ್ಲೇ ಆಕಾಶದ ತುಣುಕೊಂಡನ್ನ ಇಳಿಸೋದಕ್ಕೆ ಬೇಕಾದ lightness of being ಇದ್ದರಾಯ್ತು!
ನಿತ್ಯಮರಣ-ಜನನಗಳ ಭಾಗ್ಯ ಪಡೀಲಿಲ್ಲವಾದ್ರೂ ಹೊಸ ಬೆಳಕಿನ ಹಾದಿಗೆ ಹುಮ್ಮಸ್ಸಿಂದ ನಡಿಯೋ ಶಕ್ತಿಯನ್ನಂತೂ ನಮ್ಮೊಳಗೆ ಬಚ್ಚಿಟಿರ್ತೀವಿ....
ಸರಿಯಾಗಿ ನಿದ್ದೆ ಮಾಡೋಕಾದ್ರೆ ಮುಂಬರುವ ಮುಂಜಾವಿಗೆ ಹುರುಪು ಹೆಚ್ಚೋದಂತೂ ನಿಜ ಅಲ್ಲ್ವಾ?
ನಮ್ಮಬದುಕುಗಳಲ್ಲಿ ಯುಗಾದಿ ತರಬೇಕಾದ್ರೆ ಇದೇ ದಾರಿ ಅನ್ನಿಸುತ್ತೆ!:)

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಬೇವು-ಬೆಲ್ಲ, ಒಬ್ಬಟ್ಟಿನ ಸಂಭ್ರಮದ ಜೊತೆ ನಿಜವಾದ ಅರ್ಥದಲ್ಲಿ ಹೊಸತನ ನಿಮ್ಮೆಲ್ಲರ ಬದುಕಲ್ಲಿ ಸದಾಕಾಲಕ್ಕೂ ಹುರುಪು ತರಲಿ ಅಂತ ಹಾರೈಸ್ತಾ,
ಶ್ರೀ

Thursday, March 08, 2007

ಹೀಗೇಸುಮ್ಮನೆ ಎದ್ದಿದ್ದಲ್ಲ! :)

ಇರುವುದೆಲ್ಲವ ಬಿಟ್ಟು ಇರದುದರೆಡೆ ನೋಡೋಕೆ ಹೊರಟವಳು ಹೀಗೇ ಸುಮ್ಮನಾಗಿದ್ದು ಯಾಕೆ ಅಂತ ನೀವೆಲ್ಲ ಕೇಳಿ, ತಿವಿದು ಸುಸ್ತಾಗಿಬಿಡ್ತೀರ ಅಂತ ನನ್ನ ಸೋಮಾರಿತನ ಹೇಳ್ತಿತ್ತು. ಆದ್ರೆ ಭಾಳಾ ಇದೀರ್ರೀ ನೀವೆಲ್ಲ! ಕೊನೆಗೂ ಈ ಮಹಿಷಾಸುರಿಯನ್ನ ಬಡಿದೆಬ್ಬಿಸೇ ಬಿಟ್ಟ್ರಿ! ಹಾ, ಹಾ, ತುಂಬಾ ಖುಷಿಯಾಗಿಬಿಡಬೇಡಿ, ಏಳು ಎದ್ದೇಳು ಅಂತ ನೀವೆಲ್ಲ ಬರೆದ ಇ ಮೈಲ್, ಸ್ಕ್ರ್ಯಾಪ್ ಗಳಿಂದ ನನ್ನ ಕುಂಭಕರ್ಣತನ(ಕುಂಭಕರ್ಣಿತನ ಅನ್ನಬೇಕೋ?;) )ಬಿಟ್ಟು ಓಡಿಹೋಗಿಬಿಡ್ತು ಅಂತ! ಹೌದು, ಅದೂ ಆಗೀಗ ಕಾಡ್ತಿದ್ದಿದ್ದು ನಿಜ ಆದ್ರೂ ಈ ಪುನರುತ್ಥಾನಕ್ಕೆ( ವಾಹ್ ವಾಹ್! :p) ಇನ್ನೊಂದು ವಿಶೇಷ ಕಾರಣ ಇದೆ!
ಓಹ್ ಹನ್ನೆರಡು ಹೊಡೆಯೋದಕ್ಕೆ ಮೊದಲು, ಮಹಿಳಾ ದಿನದ ಶುಭಾಶಯಗಳು!
ಏನು ಇದ್ದಕ್ಕಿದ್ದಂತೆ ಗೋಕುಲಾಷ್ಟಮಿಗೂ ಇಮಾಮ್ ಸಾಬರಿಗೂ ಸಂಬಂಧ ಕಲ್ಪಿಸ ಹೊರಟಿದಾಳಲ್ಲಾ, ಬರೀದೇ ಬರೀದೇ ಇವಳ ಕುಟ್ಟುಮಣೆ ದಿಕ್ಕುಗೆಟ್ಟಿರಬೇಕು ಅಂದುಕೊಂಡ್ರಾ? ಏನಪ್ಪಾ ಸ್ವಲ್ಪನೂ ತಾಳ್ಮೆ ಇಲ್ಲ ನಿಮ್ಗೆ!:p

ಕುಟ್ಟೋದಕ್ಕೆ ರೆಸ್ಟ್ ಕೊಟ್ಟಿದ್ರೂ ನಿಮ್ಮಗಳ ಕುಟ್ಟಂಬಲಗಳಿಗೆ ವಿಜಿಟ್ ಕೊಟ್ಟು ತಮ್ಮ ಪ್ರತಾಪಗಳನ್ನ ಕಂಡು ಧನ್ಯಳಾಗೋ ಪುಣ್ಯಕಾರ್ಯವನ್ನೇನೂ ನಾನು ನಿಲ್ಲಿಸಿರ್ಲಿಲ್ಲವಷ್ಟೆ, ಹೀಗಿರಲಾಗಿ ,ಇತ್ತೀಚೆಗೆ ಇಂತು ಕನ್ನಡ ಬ್ಲಾಗ್ ಭೂಮಿಯಲ್ಲಿ ಅಲೆದಾಡುತ್ತಿದ್ದ ನನ್ನ ಅಂತರಾತ್ಮಕ್ಕೆ ಹಿಂದೆಂದೂ ಕಂಡಿರದ ಅಪೂರ್ವವೊಂದು ಕಂಡು ಮನಸ್ಸು ಹಿಗ್ಗಿ ಹೀರೇಕಾಯಿಯಾಯಿತು! ಆ ಹೀರೇಕಾಯಿಯನ್ನ ಹೀಗೇ ಸುಮ್ಮನೆ ಬಿಟ್ಟುಬಿಡದೆ ಹಾಕಿ ಈಗ ಕೂಟು, ಹುಳಿತೊವ್ವೆಗಳನ್ನು ಮಾಡಬೇಕನ್ನೋ ಮಹದಾಕಾಂಕ್ಷೆ ಇರುವುದೆಲ್ಲ ಘನಕಾರ್ಯಗಳನ್ನು(?) ಬಿಟ್ಟು ಇಲ್ಲಿ ಬಂದು ಕುಟ್ಟೋದಕ್ಕೆ ಪ್ರೇರೇಪಿಸಿತು!

ಸಾಕಮ್ಮಾ ಪೀಠಿಕಾ ಪ್ರಕರಣ, ಚುಕ್ಕೆಗೆ ಬಾ* ಅನ್ನುತಿದೀರಾ? ಬಂದೆ ಬಂದೆ, ಬಂದೇಬಿಟ್ಟೆ:))
ಅಲ್ಲ, ಇಷ್ಟು ದಿನ ಕನ್ನಡದಲ್ಲಿ ಬ್ಲಾಗ್ ಗಳೆನೋ ಚೆನ್ನಾಗಿಯೇ ಬರುತ್ತಿತ್ತು...ಓದೋಕೂ ಖುಷಿಯಾಗ್ತಿತ್ತು, ಆದ್ರೆ ಎಲ್ಲೋ ಒಂದು ಕಡೆ ಏನಪ್ಪಾ ಒಬ್ಬಳೇ ಅಲೀತಿದೀನಿ ಈ ಗಂಡುಭೂಮಿನಲ್ಲಿ ಅಂತ ನನ್ನಂಥಾ 'ಗಂಡುಬೀರಿ'ಗೂ ಅನ್ನಿಸಿಬಿಡ್ತಿತ್ತು! ಮನಸ್ವಿನಿ ಬಿಟ್ಟರೆ ನನ್ನ ಕಣ್ಣಿಗೆ ಯಾವ ಕನ್ನಡತಿಯೂ ಕಂಡಿರಲಿಲ್ಲ ಅನ್ನಿಸುತ್ತೆ ಇಲ್ಲಿ... ಮೊನ್ನೆ ಸುಶ್ರುತರ ಮೌನಗಾಳದಿಂದ ಸಿಂಧು ಅವರ ಎಲ್ಲ ನೋಟಗಳಾಚೆಗೆ ಕಣ್ಣು ಹಾಯಿಸಿದೆ...ಕವನಗಳು ಓದಿಸಿಕೊಳ್ಳುತ್ತಾನೇ ಹೋದ್ವು! ನೊಂದ ಹೃದಯವೇ... , ಕೇಳಬಾರದಿತ್ತು...ಆದ್ರೂ,
ತಂಪಾಗಿ ಷುರುವಾಗಿ ಕೊನೆಯಲ್ಲೆಲ್ಲೋ ಮೆಲ್ಲಗೊಂದು ಪ್ರಶ್ನೆ ಇಡುವ ಸುಪರ್ಣಾ ನದಿಯ ತೀರದಲ್ಲೊಂದು ಸಂಜೆ...

ಅಲ್ಲಿಂದ ಮನಸ್ಸನ್ನ ಮಾತಾಡಿಸುತ್ತಿರೋ ಶ್ರೀ (ಹೀಗೇ ಸುಮ್ಮನೆ ಇಲ್ಲಿ ಬಂದು ಕೂತಿರೋ ನಾನಲ್ಲಪಾ!:)) ) ಮನೆಗೊಂದು ಭೇಟಿ...ಕನಸು -ನನಸುಗಳ ಕನವರಿಕೆಗಳು, ಪುಟ್ಟ ಪುಟ್ಟ ಹರಟೆಗಳು, ಎಲ್ಲಕ್ಕಿಂತ ಹಿಡಿಸಿದ್ದು ಪುಟ್ಟ ಕವನ - ಮನಸು ಏಕಾಂಗಿಯಾದಾಗ...

ಯಾವುದೇ ದಿನಾಚರಣೆಗಳಿಗೆ ಅಂಥದ್ದೇನೂ ಮಹತ್ವ ಕೊಡೋದಿಲ್ಲ ನಾನು. ಹಾಗೆ ಮಹಿಳಾ ದಿನಕ್ಕೆ ಸರಿಯಾಗೆ ನನ್ನ ಕಣ್ಣಿಗೆ ಎರಡು ಕನ್ನಡತಿ ಬ್ಲಾಗ್ ಗಳು ಬಿದ್ದಿದ್ದು, ಅವು ಕಣ್ಣಿಗೇ ನಿಲ್ಲದೆ ಇದೇ ಸಮಯಕ್ಕೆ ಸರಿಯಾಗಿ ಹೃದಯಕ್ಕೂ ಧಾಳಿಯಿಟ್ಟಿದ್ದು ಕಾಕತಾಳೀಯ. ಆದ್ರೆ ಆ ಖುಷಿಯಲ್ಲಿ ನಾನು ನನ್ನ ಇಷ್ಟು ದಿನದ ನಿದ್ದೆ ಸ್ವಪ್ರೇರಣೆಯಿಂದ ಬಿಟ್ಟಿದ್ದು, ಈ ಅಪರಾತ್ರಿಯಲ್ಲಿ ಇಷ್ಟುದ್ದ ಕೊರೀತಾ ಕೂತಿರೋದು ಜಗತ್ತಿನ ವಿಸ್ಮಯಗಳ ಪಟ್ಟಿಗೆ ಸೇರಬೇಕಂತ ನನ್ನ ನಿದ್ರಾಮಹಾತ್ಮೆಯನ್ನ ಬಲ್ಲವರೆಲ್ಲ ಕ್ಯಾಂಪೇನ್ ಮಾಡೋದಂತೂ ಖಂಡಿತ! ;D

P.S,: ಈಗಷ್ಟೇ ಈ ಮಂಕುತಲೆಗೆ ಫ್ಲ್ಯಾಷ್ ಆದ ಇನ್ನೊಂದು ಕಾಕತಾಳೀಯ ವಿಷ್ಯ - ಸಿಂಧು, ಶ್ರೀ ಎರಡೂ ನನ್ನವೇ ಹೆಸರುಗಳಾಗಿರೋದು!! (ಸಿಂಧು ನನ್ನ 'ಪೆಟ್ ನೇಮ್'!)

(ಸಿಂಧು ಹಾಗೂ ಶ್ರೀ ಇಬ್ಬರೂ ನನ್ನ ಕಣ್ಣಿಗೆ ಬಿದ್ದಿದ್ದು ಈಗ ಅಷ್ಟೆ. ಶ್ರೀ ಮೇ ೨೦೦೬ರಿಂದ, ಸಿಂಧು ಡಿಸೆಂಬರ್ ೨೦೦೬ರಿಂದ ಕುಟ್ಟುತ್ತಿದಾರೆ ಅನ್ನುತ್ತೆ ಬ್ಲಾಗರ್)
*ಚುಕ್ಕೆಗೆ ಬಾ = come to the point! translation courtesy a friend of mine who thinks he cracks a joke everytime he opens his mouth!:))